ಚಿಕ್ಕಮಗಳೂರು : ಇಂಗ್ಲೀಷ್ ಭಾಷೆ ನಮ್ಮ ಕನ್ನಡತನಕ್ಕೆ ಸವಾಲನ್ನು ಒಡ್ಡುತ್ತಿದೆ, ಈ ದುರಂತವನ್ನು ಮತ್ತೆ ಕನ್ನಡಿಗರೆಲ್ಲ ಒಂದಾಗುವ ಮೂಲಕ ತಪ್ಪಿಸಬೇಕಿದೆ ಎಂದು ಇಂಧನ ಹಾಗೂ ಜಿಲ್ಲಾ ಉಸ್ತುವರಿ ಸಚಿವ ಕೆ.ಜೆ.ಜಾರ್ಜ್ ಆಗ್ರಹಿಸಿದ್ದಾರೆ.
ಈ ಬಗ್ಗೆ ಸಚಿವ ಕೆ.ಜೆ.ಜಾರ್ಜ್ ಮಾತನಾಡಿ, ಜ್ಞಾನ ಸಂಪಾದನೆಗೆ ಎಲ್ಲಾ ಭಾಷೆಗಳು ಬೇಕು. ಅದಕ್ಕಾಗಿ ಇಂಗ್ಲಿಷ್ ಹಾಗೂ ಹಲವು ಭಾಷೆಗಳನ್ನು ಕಲಿಯೋಣ. ವ್ಯವಹಾರಕ್ಕಾಗಿ ಅವನ್ನು ಬಳಸೋಣ. ಆದರೆ, ನಮ್ಮ ಮಾತೃಭಾಷೆ ಕನ್ನಡವನ್ನು ಪ್ರೀತಿಯಿಂದ ಅಪ್ಪಿಕೊಳ್ಳೋಣ, ಉಳಿಸೋಣ. ಬೆಳೆಸೋಣ, ಮುಂದಿನ ಪೀಳಿಗೆಗೆ ಹೆಮ್ಮೆಯಿಂದ ನೀಡೋಣ. ಸಾಹಿತ್ಯ ಕ್ಷೇತ್ರದಲ್ಲೂ ಕನ್ನಡ ಅದ್ಭುತ ಸಾಧನೆ ಮಾಡಿದೆ. ಹಿಂದಿ ಭಾಷೆ ಬಿಟ್ಟರೆ ದೇಶದ ಎಂಟು ಜ್ಞಾನಪೀಠ ಪ್ರಶಸ್ತಿ ಪಡೆದ ಏಕೈಕ ಭಾಷೆ ಕನ್ನಡ ಎನ್ನುವುದು ನಮ್ಮೆಲ್ಲರ ಹೆಮ್ಮೆ, 2008ರಲ್ಲಿ ಕನ್ನಡಕ್ಕೆ ರಾಷ್ಟ್ರೀಯ ಶಾಸ್ತ್ರೀಯ ಸ್ಥಾನಮಾನದ ಅಭಿಮಾನವು ನಮ್ಮದೇ. ಕೇವಲ ಬೆರಳೆಣಿಕೆಯಷ್ಟು ಭಾಷೆಗಳಿಗೆ ಮಾತ್ರ ಶಾಸ್ತ್ರೀಯ ಸ್ಥಾನಮಾನ ಸಿಕ್ಕಿರುವುದು ನಮ್ಮ ಭಾಷೆ ಮಹತ್ವ ಎಂತಹದು ಎನ್ನುವುದನ್ನು ಸಾರುತ್ತದೆ ಎಂದರು.
ಕನ್ನಡ ಸಾಹಿತ್ಯ ಲೋಕಕ್ಕೆ ವಚನ ಸಾಹಿತ್ಯ ಮತ್ತು ದಾಸ ಸಾಹಿತ್ಯ ಪ್ರಾಕಾರಗಳು ವಿಶೇಷ ಮೇರುಗುಗಳನ್ನು ತಂದುಕೊಟ್ಟಿವೆ. ಕನ್ನಡದ ಜನಪದರು ಜಾನಪದ ಗೀತೆಗಳ ಮೂಲಕ ಈ ನೆಲದ ಸೊಗಡನ್ನು ಹೆಚ್ಚಿಸಿದ್ದಾರೆ. ಭಾಷೆ ನಿರಂತರವಾಗಿ ಬಳಕೆಯಾಗುತ್ತಿದ್ದರೆ ಮಾತ್ರವೇ ಅದರ ಸೊಬಗು ಸೌಂದರ್ಯ, ಅದರ ಅಭಿಮಾನಗಳು ಹೆಚ್ಚಾಗುವುದು. ಈ ಭಾಷೆಯನ್ನು ಸಮೃದ್ಧವಾಗಿಸುವ ದೊಡ್ಡ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಕನ್ನಡತನ ಉಳಿಸಿಕೊಳ್ಳಲು ಕಂಕಣಬದ್ಧರಾಗೋಣ ಎಂದು ಹೇಳಿದರು.
ನಮ್ಮ ಸರ್ಕಾರ 2023ರಲ್ಲಿ ಅಧಿಕಾರಕ್ಕೆ ಬಂದ ನಂತರ ಸಾಮಾಜಿಕ, ಆರ್ಥಿಕವಾಗಿ ಹಿಂದುಳಿದವರಿಗೆ ಹಾಗೂ ಲಿಂಗತಾರತಮ್ಯ ಸರಿದೂಗಿಸುವ ಜಾತ್ಯಾತೀತವಾಗಿ ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆಗಳನ್ನು ಯಾವುದೇ ಅಡ್ಡಿ, ಅತಂಕವಿಲ್ಲದೆ ವಿರೋಧಿಗಳ ನಿರಂತರ ವಿರೋಧದ ನಡುವೆಯೂ ಅತ್ಯಂತ ಸಮರ್ಪಕವಾಗಿ ಅನುಷ್ಠಾ ನಗೊಳಿಸಿರುವುದು ನಮ್ಮ ಸರ್ಕಾರದ ಬದ್ಧತೆ ಸಾರುತ್ತದೆ. ಅದಕ್ಕಾಗಿ ನಮ್ಮ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಪಂಚ ಗ್ಯಾರಂಟಿ ಯೋಜನೆ ಜಾರಿಗೆ ತಂದರು ಸಹ ಅಭಿವೃದ್ಧಿ ವಿಷಯದಲ್ಲಿ ನಮ್ಮ ಸರ್ಕಾರ ಯಾವುದೇ ರಾಜಿ ಮಾಡಿಕೊಳ್ಳದೇ ಇಡೀ ರಾಜ್ಯದ ಸವಾಂಗೀಣ ಅಭಿವೃದ್ಧಿಗೆ ಒತ್ತು ಕೊಟ್ಟಿದೆ. ಅದರಲ್ಲಿ ವಿಶೇಷವಾಗಿ ನಮ್ಮ ಚಿಕ್ಕಮಗಳೂರು ಜಿಲ್ಲೆಯಲ್ಲಿ ಅನೇಕ ಅಭಿವೃದ್ಧಿ ಕಾರ್ಯಕ್ರಮ ಕೈಗೆತ್ತಿಕೊಳ್ಳಲಾಗಿದೆ ಎಂದು ಹೇಳಿದರು. ಚಿಕ್ಕಮಗಳೂರು ಜಿಲ್ಲೆಯ 5 ವಿಧಾನಸಭಾ ಕ್ಷೇತ್ರ ಶಾಸಕರಿಗೆ ತಲಾ ₹50 ಕೋಟಿಯಂತೆ ₹250 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಕಾಮಗಾರಿಗಳು ಪ್ರಗತಿಯಲ್ಲಿವೆ. ಚಿಕ್ಕಮಗಳೂರು ಜಿಲ್ಲೆಯ ಲೋಕೋಪ ಯೋಗಿ ಇಲಾಖೆಯಲ್ಲಿ 89 ವಿವಿಧ ಕಾಮಗಾರಿಗಳಿಗೆ ಒಟ್ಟು ₹150 ಕೋಟಿ ಹಣ ಬಿಡುಗಡೆಯಾಗಿದ್ದು, ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ಹೇಳಿದರು.
ಇದನ್ನೂ ಓದಿ : ಕನ್ನಡವನ್ನು ಚಿಲ್ಲರೆ ಅಂದ ಕಾಂತಾರ ನಟ ಗುಲ್ಶನ್ ದೇವಯ್ಯ!







