ಬೆಂಗಳೂರಿನಲ್ಲೇ ಹುಟ್ಟಿ ಬೆಳೆದ ನಟ ಗುಲ್ಶನ್ ದೇವಯ್ಯ ಬಾಲಿವುಡ್‌ನಲ್ಲಿ ಗುರ್ತಿಸಿಕೊಂಡಿದ್ದು, ಹಿಂದಿ ಸಿನಿಮಾ ಹಾಗೂ ವೆಬ್ ಸಿರೀಸ್‌ಗಳಲ್ಲಿ ಹೆಚ್ಚು ನಟಿಸಿದ್ದಾರೆ. ರಿಷಬ್ ಶೆಟ್ಟಿ ನಿರ್ದೇಶನದ ‘ಕಾಂತಾರ ಅಧ್ಯಾಯ 1’ ಚಿತ್ರದ ಮೂಲಕ ಗುಲ್ಶನ್ ದೇವಯ್ಯ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಗುಲ್ಶನ್ ಅವರ ಅಭಿನಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿತ್ತು. ಇದೀಗ ಕನ್ನಡ ಭಾಷೆ ಉಚ್ಛಾರಣೆ ಬಗ್ಗೆ ಗುಲ್ಶನ್ ನೀಡಿರುವ ಹೇಳಿಕೆ ವೈರಲ್ ಆಗ್ತಿದೆ.

ಈ ಹಿಂದೆ ಕೂಡ ಇದೇ ರೀತಿ ಹೇಳಿಕೆಗಳಿಂದ ಅವರು ಕೆಲವರ ಕೆಂಗಣ್ಣಿಗೆ ಗುರಿಯಾಗಿದ್ದರು. ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಪತ್ರಕರ್ತರೊಬ್ಬರು ಕನ್ನಡ್ ಎಂದಾಗ ನಾನು ಅದನ್ನು ಸರಿಪಡಿಸಲಿಲ್ಲ ಎಂದು ನನ್ನ ಮೇಲೆ ಅಸಮಾಧಾನ ವ್ಯಕ್ತಪಡಿಸಿದ್ದರು. ಅದರಲ್ಲಿ ತಪ್ಪೇನಿದೆ. ನಾನು ಕೆಲವೊಮ್ಮೆ ಹಿಂದಿ ಮಾತನಾಡುವಾಗ ಕನ್ನಡ್ ಅಂತೀನಿ. ಅದರಲ್ಲೇನಿದೆ ಬಿಡಿ ಎಂದಿದ್ದಾರೆ.
ನಾವು ಕೂಡ ಕೆಲ ಬೇರೆ ಭಾಷೆಯ ಪದಗಳನ್ನು ಸರಿಯಾಗಿ ಉಚ್ಛಾರಣೆ ಮಾಡುವುದಿಲ್ಲ. ತಮಿಳ್, ಫಳಂ ಪದಗಳನ್ನು ತಮಿಳಿನವರು ಉಚ್ಛಾರಣೆ ಮಾಡುವಂತೆ ಸ್ಪಷ್ಟವಾಗಿ ಮಾಡಲ್ಲ. ಎಲ್ಲರೂ ನಮ್ಮ ಭಾಷೆಯನ್ನು ಸರಿಯಾಗಿ ಉಚ್ಛಾರಣೆ ಮಾಡಲ್ಲ ಎಂದು ಕೇಳುತ್ತಾ ಕೂರುವುದು ಮೂರ್ಖತನ. ನಾನು ಹುಟ್ಟಿದಾಗ ಬ್ಯಾಂಗಳೂರ್ ಅಂತ ಇತ್ತು. ಬಳಿಕ ಬೆಂಗಳೂರು ಮಾಡಿದರು. ಪರವಾಗಿಲ್ಲ. ಇದೆಲ್ಲಾ ಚಿಲ್ರೆ ವಿಷ್ಯ ಅಂತೀನಿ. ಸಿಲ್ಲಿ ವಿಚಾರದ ಬಗ್ಗೆ ಸುಮ್ನೆ ಮಾತಾಡ್ತೀವಿ. ಫ್ರೆಂಡ್ಲಿಯಾಗಿ ಕೇಳಿದ್ರೆ ಪರವಾಗಿಲ್ಲ, ಬಹಳ ಗಂಭೀರವಾಗಿ ಭಾವಿಸುವುದು ಸರಿಯಲ್ಲ ಎಂದು ಗುಲ್ಶನ್ ಹೇಳಿದ್ದಾರೆ. ಅವರ ಹೇಳಿಕೆಗೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನಿಮ್ಮ ಹೆಸರಿನಲ್ಲಿ ಯಾವುದಾದರೂ ಅಕ್ಷರ ಬಿಟ್ಟು ಉಚ್ಛಾರಣೆ ಮಾಡಿದ್ರೆ ಸರೀನಾ? ಎಂದು ಪ್ರಶ್ನಿಸಿದ್ದಾರೆ.

ಇತ್ತೀಚೆಗೆ ಟ್ವಿಟ್ಟರ್‌ನಲ್ಲಿ ಕೂಡ ಇದೇ ವಿಚಾರದ ಬಗ್ಗೆ ಗುಲ್ಶನ್ ಪ್ರತಿಕ್ರಿಯಿಸಿದ್ದರು. ‘ಕಾಂತಾರ-1’ ನಟನ ಟ್ವೀಟ್‌ಗೆ ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿ “ವರದಿಗಾರರು ಕನ್ನಡದ ಬದಲು ಕನ್ನಡ್ ರೀತಿಯ ಪದಗಳನ್ನು ಬಳಸಿದಾಗ ಅಥವಾ ಕಾಂತಾರವನ್ನು ತಪ್ಪಾಗಿ ಉಚ್ಚರಿಸಿದಾಗ, ನೀವು ಅವುಗಳನ್ನು ಸರಿಪಡಿಸಿದರೆ ಒಳ್ಳೆಯದು” ಎಂದಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ್ದ ಗುಲ್ಶನ್ “ಪರವಾಗಿಲ್ಲ ಬಿಡಿ, ಕನ್ನಡ ಭಾಷಿಕರು ಇತರ ಭಾಷೆಗಳ ಪದಗಳನ್ನು ತಪ್ಪಾಗಿ ಉಚ್ಚರಿಸುತ್ತಾರೆ. ವೈಯಕ್ತಿಕವಾಗಿ ನನಗೆ ಅದು ದೊಡ್ಡ ವಿಷಯವಲ್ಲ ಎಂದು ಅನಿಸುತ್ತದೆ” ಎಂದು ರಿಪ್ಲೇ ಮಾಡಿದ್ದರು.
ಉದ್ದೇಶಪೂರ್ವಕವಾಗಿ ಯಾವುದೇ ಭಾಷೆಯನ್ನು ಅಪಹಾಸ್ಯ ಮಾಡುವುದು ಅಥವಾ ಅವಮಾನಿಸುವುದು ಮಾತ್ರ ತಪ್ಪು. ನನ್ನ ವೈಯಕ್ತಿಕ ಅಭಿಪ್ರಾಯದಲ್ಲಿ, ಏಕತೆ ಅಂದರೆ ಯಾವುದೇ ರೀತಿಯಲ್ಲಿ ನೋವುಂಟುಮಾಡುವ ಅಥವಾ ಕೀಳಾಗಿ ಕಾಣದ ಸಣ್ಣಪುಟ್ಟ ವಿಷಯಗಳನ್ನು ನಾವು ಸ್ವೀಕರಿಸುತ್ತೇವೆ ಎಂದು ಗುಲ್ಶನ್ ದೇವಯ್ಯ ಬರೆದುಕೊಂಡಿದ್ದರು.
ಇದನ್ನೂ ಓದಿ : ಸಿಗ್ನಲ್ನಲ್ಲಿ ನಿಂತಿದ್ದ 3 ಬೈಕ್ಗಳಿಗೆ ಆಂಬ್ಯುಲೆನ್ಸ್ ಡಿಕ್ಕಿ – ಇಬ್ಬರು ಸ್ಥಳದಲ್ಲೇ ಸಾವು!







