ಆಂಧ್ರದ ಶ್ರೀಕಾಕುಳಂ ವೆಂಕಟೇಶ್ವರ ಸ್ವಾಮಿ ದೇಗುಲದಲ್ಲಿ ಕಾಲ್ತುಳಿತ – 10 ಮಂದಿ ಸಾವು!

ಆಂಧ್ರ : ಆಂಧ್ರಪ್ರದೇಶದ ಕಾಶಿಬುಗ್ಗ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಭೀಕರ ಕಾಲ್ತುಳಿತ ಸಂಭವಿಸಿ 10 ಮಂದಿ ಭಕ್ತರು ಸಾವನ್ನಪ್ಪಿರುವ ಘಟನೆ ನಡೆದಿದೆ. ಕಾಲ್ತುಳಿತದಲ್ಲಿ ಮಹಿಳೆಯರು, ಮಕ್ಕಳು ಬಲಿಯಾಗಿದ್ದಾರೆ.

ಈ ಘಟನೆ ಶ್ರೀಕಾಕುಳಂ ಜಿಲ್ಲೆ ಕಾಶಿಬುಗ್ಗ ವೆಂಟಕೇಶ್ವರ ಸ್ವಾಮಿ ದೇಗುಲದಲ್ಲಿ ನಡೆದಿದ್ದು, ಏಕಾದಶಿ ಹಿನ್ನೆಲೆ ಇಂದು ಭಕ್ತರು ಸಾಕಷ್ಟು ಸಂಖ್ಯೆಯಲ್ಲಿ ಆಗಮಿಸಿದ್ದರು. ದೇವಸ್ಥಾನದ ಧಾರ್ಮಿಕ ಮೆರವಣಿಗೆ ಸಂದರ್ಭದಲ್ಲಿ ಸಾವಿರಾರು ಭಕ್ತರು ಏಕಾಏಕಿ ನುಗ್ಗಿದ್ದಕ್ಕೆ ನೂಕುನುಗ್ಗಲು ಉಂಟಾಗಿದೆ. ಈ ಕಾಲ್ತುಳಿತ ದುರಂತದಲ್ಲಿ ಮತ್ತಷ್ಟು ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ.

ದೇವಸ್ಥಾನದ ಆವರಣದಲ್ಲಿ ಭಕ್ತರ ಶವಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಭಯಾನಕ ದೃಶ್ಯಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿವೆ. ಕಾಲ್ತುಳಿತ ದುರಂತಕ್ಕೆ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಆಘಾತ ವ್ಯಕ್ತಪಡಿಸಿದ್ದು, ಭಕ್ತರ ಸಾವು ಹೃದಯವಿದ್ರಾವಕ ಎಂದು ವಿಷಾದಿಸಿದ್ದಾರೆ.

ಈ ದುರಂತ ಘಟನೆಯಲ್ಲಿ ಭಕ್ತರ ಸಾವು ಅತ್ಯಂತ ಹೃದಯವಿದ್ರಾವಕವಾಗಿದೆ. ಮೃತರ ಕುಟುಂಬಗಳಿಗೆ ನನ್ನ ಸಂತಾಪಗಳು. ಗಾಯಗೊಂಡವರಿಗೆ ತ್ವರಿತ ಮತ್ತು ಸೂಕ್ತ ಚಿಕಿತ್ಸೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ನಾಯ್ಡು ತಿಳಿಸಿದ್ದಾರೆ. ಸ್ಥಳೀಯ ಅಧಿಕಾರಿಗಳು ಮತ್ತು ಸಾರ್ವಜನಿಕ ಪ್ರತಿನಿಧಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಹಾರ ಕ್ರಮಗಳನ್ನು ಮೇಲ್ವಿಚಾರಣೆ ಮಾಡುವಂತೆ ಸಿಎಂ ಹೇಳಿದ್ದಾರೆ.

ಇದನ್ನೂ ಓದಿ : ಲೈಟ್ ಹಾಕಿದ ವಿಚಾರಕ್ಕೆ ಗಲಾಟೆ – ಖಾರದ ಪುಡಿ ಎರಚಿ ಸಹೋದ್ಯೋಗಿಯ ಹತ್ಯೆ!

Btv Kannada
Author: Btv Kannada

Read More