ಮೈಸೂರು : ರಾಜ್ಯ ಸರ್ಕಾರದ ಬಹುನಿರೀಕ್ಷಿತ ಜಾತಿ ಗಣತಿ ಸಮೀಕ್ಷೆಯಲ್ಲಿ ಭಾರೀ ಅವ್ಯವಹಾರ ನಡೆದಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಸಮೀಕ್ಷಾ ಕಾರ್ಯವನ್ನು ಪೂರ್ಣಗೊಳಿಸಲು ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲೂಕಿನಲ್ಲಿ ಅಧಿಕಾರಿಗಳು ಹಾಸ್ಟೆಲ್ ವಿದ್ಯಾರ್ಥಿಗಳ ಹೆಸರುಗಳನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ.

ಕೆ.ಆರ್.ನಗರ ತಾಲೂಕಿನಲ್ಲಿರುವ ಬಿಸಿಎಂ (ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ) ಹಾಸ್ಟೆಲ್‌ಗಳ ವಿದ್ಯಾರ್ಥಿಗಳನ್ನು ಸಮೀಕ್ಷೆಯಲ್ಲಿ ಒಂದು ಕುಟುಂಬದ ಸದಸ್ಯರಾಗಿ ಸೇರ್ಪಡೆ ಮಾಡಲಾಗಿದೆ. ಗಣತಿ ಪ್ರಕ್ರಿಯೆಯಲ್ಲಿ ಮಕ್ಕಳ ಹೆಸರು ಸೇರ್ಪಡೆಗೆ ಆಧಾರ್ ಕಾರ್ಡ್ ಕಡ್ಡಾಯವಿಲ್ಲದ ಕಾರಣ, ಅಧಿಕಾರಿಗಳು ಇದರ ಲಾಭ ಪಡೆದು ಬಿಸಿಎಂ ಹಾಸ್ಟೆಲ್ ವಿದ್ಯಾರ್ಥಿಗಳ ಹೆಸರಿನ ಪಟ್ಟಿಯನ್ನು ಪಡೆದು, ಮನಬಂದಂತೆ ಹೆಸರುಗಳನ್ನು ಸೇರ್ಪಡೆ ಮಾಡಿದ್ದಾರೆ.

ಈ ರೀತಿ ಅಕ್ರಮವಾಗಿ ಹೆಸರುಗಳನ್ನು ಸೇರಿಸಿ ಕೆ.ಆರ್.ನಗರ ತಹಶೀಲ್ದಾರ್ ಸುರೇಂದ್ರ ಅವರು ವರದಿ ತಯಾರಿಸಿ ಸರ್ಕಾರಕ್ಕೆ ಕಳುಹಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಕಾರ್ಯಕರ್ತರಾದ ಬೆಲವತ್ತ ರಾಮಚಂದ್ರ ಅವರು ಮೈಸೂರು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದಾರೆ. ಕೆ.ಆರ್. ನಗರ ತಹಶೀಲ್ದಾರ್ ಸುರೇಂದ್ರ ಅವರ ವಿರುದ್ಧ ತಕ್ಷಣವೇ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಕೆ.ಆರ್.ನಗರದಿಂದ ಸರ್ಕಾರಕ್ಕೆ ಕಳುಹಿಸಲಾದ ಜಾತಿ ಗಣತಿ ವರದಿಯ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಬೆಲವತ್ತ ರಾಮಚಂದ್ರ ಅವರು ಜಿಲ್ಲಾಧಿಕಾರಿಯವರನ್ನು ಆಗ್ರಹಿಸಿದ್ದಾರೆ. ರಾಜ್ಯ ಸರ್ಕಾರದ ಪ್ರತಿಷ್ಠಿತ ಗಣತಿ ಕಾರ್ಯದಲ್ಲಿಯೇ ಇಂತಹ ಲೋಪಗಳು ನಡೆದಿರುವ ಆರೋಪವು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಇದನ್ನೂ ಓದಿ : ರಾಮನಗರ ಹೋಮ್ ಸ್ಟೇನಲ್ಲಿ ರೇವ್ ಪಾರ್ಟಿ ಆರೋಪ – 130ಕ್ಕೂ ಹೆಚ್ಚು ಮಂದಿ ಅರೆಸ್ಟ್!







