ದೇಶದಲ್ಲಿ ಹೆಚ್ಚಿನ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಗಳನ್ನು ಬಿಜೆಪಿ ಮತ್ತು RSS ಸೃಷ್ಟಿಸುತ್ತಿರುವುದರಿಂದ, ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ನಿಷೇಧಿಸಬೇಕು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಗ್ರಹಿಸಿದ್ದಾರೆ.
ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಜನ್ಮ ದಿನಾಚರಣೆ ಹಿನ್ನೆಲೆ ಕಾಂಗ್ರೆಸ್ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ನಡೆಸಿದ ವಾಗ್ದಾಳಿಗೆ ತಿರುಗೇಟು ನೀಡಿದ ಅವರು, 1948ರಲ್ಲಿ ಮಹಾತ್ಮ ಗಾಂಧಿಯವರ ಹತ್ಯೆಯ ನಂತರ RSS ಅನ್ನು ಟೀಕಿಸಿದ ಸರ್ದಾರ್ ಪಟೇಲ್ ಅವರ ಹೇಳಿಕೆಯನ್ನು ಉಲ್ಲೇಖಿಸಿದರು.
ದೇಶದಲ್ಲಿನ ಹೆಚ್ಚಿನ ಸಮಸ್ಯೆಗಳು ಮತ್ತು ಕಾನೂನು ಸುವ್ಯವಸ್ಥೆ ಸಮಸ್ಯೆಗಳು ಬಿಜೆಪಿ-ಆರ್‌ಎಸ್‌ಎಸ್‌ಗೆ ಸಂಬಂಧಿಸಿವೆ. ಹಾಗಾಗಿ ಆರ್‌ಎಸ್‌ಎಸ್ ಅನ್ನು ನಿಷೇಧಿಸಬೇಕು ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ. ಇಂದು ದೇಶವು “ಉಕ್ಕಿನ ಮನುಷ್ಯ” ಸರ್ದಾರ್ ಪಟೇಲ್ ಅವರ ಜನ್ಮ ದಿನಾಚರಣೆ ಮತ್ತು ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಪುಣ್ಯತಿಥಿಯನ್ನು ಆಚರಿಸುತ್ತಿದೆ. ಈ ಇಬ್ಬರು ಮಹಾನ್ ನಾಯಕರು, “ಉಕ್ಕಿನ ಮನುಷ್ಯ” ಮತ್ತು “ಉಕ್ಕಿನ ಮಹಿಳೆ”, ದೇಶದ ಏಕತೆಯನ್ನು ಕಾಪಾಡಿಕೊಳ್ಳಲು ಪ್ರಮುಖ ಕೊಡುಗೆ ನೀಡಿದ್ದಾರೆ ಎಂದರು.







