ಗದಗ : ಕಂದಾಯ ನಿರೀಕ್ಷಕ ಮಾಡಿದ ಯಡವಟ್ಟಿನಿಂದ ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ್ ಇಕ್ಕಟ್ಟಿಗೆ ಸಿಲುಕಿದ್ದಾರೆ. ಕೆಲಸಕ್ಕೆ ಚಕ್ಕರ್ ಹಾಕಿದ್ದ ಕಂದಾಯ ನಿರೀಕ್ಷಕನಿಂದ ಗದಗ ಡಿಸಿ ಸಿ.ಎನ್ ಶ್ರೀಧರ್ಗೆ ನ್ಯಾಯಾಲಯದಿಂದ ನೋಟಿಸ್ ಜಾರಿಯಾಗಿದೆ. ಇನ್ನೊಂದೆಡೆ ಗದಗ ತಹಶೀಲ್ದಾರ್ ಶ್ರೀನಿವಾಸ ಕುಲಕರ್ಣಿಗೆ ವಾರಂಟ್ ಜಾರಿಯಾಗಿದೆ.

ಕಂದಾಯ ನಿರೀಕ್ಷಕನ ಬೇಜವಾಬ್ದಾರಿತನದಿಂದ ಜಿಲ್ಲಾಧಿಕಾರಿ ಮತ್ತು ತಹಶೀಲ್ದಾರ್ ಇಬ್ಬರೂ ಪೇಚಿಗೆ ಸಿಲುಕುವಂತಾಗಿದೆ. ನಗರದ ಚವಡಿ ಕೂಟದ ಕಂದಾಯ ನಿರೀಕ್ಷಕರ ಕಾರ್ಯಾಲಯದ ಅಧಿಕಾರಿಯಾಗಿರುವ ಕಂದಾಯ ನಿರೀಕ್ಷಕ ಎನ್.ಐ. ಹಡಗಲಿಮಠ ಹಲವು ತಿಂಗಳಿಂದ ಕಚೇರಿಗೆ ಬಾರದೇ ಡ್ಯೂಟಿಗೆ ಚಕ್ಕರ್ ಹಾಕಿದ್ದಾರೆ. ಈ ಹಿಂದೆ ಹಲವಾರು ಬಾರಿ ಇವರ ವಿರುದ್ಧ ದೂರುಗಳಿದ್ದರೂ, ಅವರ ನಡವಳಿಕೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ಕಂದಾಯ ನಿರೀಕ್ಷಕರಿಗಾಗಿ ಕಚೇರಿಗೆ ಅಲೆದಾಡಿ ಅಲೆದಾಡಿ ಸಾರ್ವಜನಿಕರು ಸುಸ್ತಾಗುತ್ತಿದ್ದು, ಏಳು ಪ್ರಕರಣಗಳಲ್ಲಿ ನ್ಯಾಯಾಲಯಕ್ಕೆ ವರದಿ ಒಪ್ಪಿಸಲು ವಿಳಂಬ ಮಾಡಿದ್ದಕ್ಕೆ ಈಗ ಜಿಲ್ಲಾಧಿಕಾರಿ ಮತ್ತು ತಹಶೀಲ್ದಾರ್ ಇಕ್ಕಟ್ಟಿಗೆ ಸಿಲುಕಿದ್ದಾರೆ. ವಿಳಂಬ ಹಿನ್ನೆಲೆ ಕಾರಣ ಕೇಳಿ ನ್ಯಾಯಾಲಯ ಡಿಸಿ ಸಿ.ಎನ್ ಶ್ರೀಧರ್ಗೆ ನೋಟಿಸ್ ಜಾರಿ ಮಾಡಿದ್ದು, ಇನ್ನೊಂದೆಡೆ ತಹಶೀಲ್ದಾರ್ ಶ್ರೀನಿವಾಸ ಕುಲಕರ್ಣಿಗೆ ವಾರಂಟ್ ಜಾರಿ ಮಾಡಿದೆ.

ನೋಟಿಸ್ ತಲುಪಿದ 24 ಗಂಟೆಯೊಳಗೆ ಕರ್ತವ್ಯಕ್ಕೆ ಹಾಜರಾಗಿ ವರದಿ ಒಪ್ಪಿಸಲು ಸೂಚಿಸಲಾಗಿದೆ. ಆದರೆ, ತಹಶೀಲ್ದಾರ್ ನೋಟಿಸ್ ಜಾರಿ ಮಾಡಿದರೂ ಕೂಡ ಕಚೇರಿಯಲ್ಲಿ RI ಮಾತ್ರ ಕಾಣಿಸಿಕೊಂಡಿಲ್ಲ. RI ಬೇಜವಾಬ್ದಾರಿತನಕ್ಕೆ ಸಾರ್ವಜನಿಕರೂ ಸುಸ್ತಾಗಿದ್ದು, ಇದೀಗ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರ ಒತ್ತಾಯಿಸಿದ್ದಾರೆ.
ಇದನ್ನೂ ಓದಿ : ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್‌ನ್ಯೂಸ್ – ನಾಳೆಯಿಂದ 5ನೇ ರೈಲು ಸಂಚಾರ ಆರಂಭ!







