ಸೌದಿ ಅರೇಬಿಯಾ : ಪ್ರಸಕ್ತ ವರ್ಷದ ಹಜ್ ಯಾತ್ರೆ ಆರಂಭಕ್ಕೂ ಮುಂಚಿತವಾಗಿ, ಸೌದಿ ಅರೇಬಿಯಾ 14 ದೇಶಗಳ ನಾಗರಿಕರಿಗೆ ವೀಸಾ ನೀಡುವುದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ತಾತ್ಕಾಲಿಕ ವೀಸಾ ನಿಷೇಧವು ವ್ಯಾಪಾರ ಮತ್ತು ಕುಟುಂಬ ವೀಸಾಗಳ ಜೊತೆಗೆ ಉಮ್ರಾ ವೀಸಾಗಳಿಗೂ ಅನ್ವಯಿಸುತ್ತದೆ.
ನೋಂದಣಿ ಇಲ್ಲದೆ ಜನರು ಹಜ್ ಯಾತ್ರೆಯಲ್ಲಿ ಭಾಗವಹಿಸುವುದನ್ನು ತಡೆಯಲು ಹಾಗೂ ಹೆಚ್ಚಿನ ಜನದಟ್ಟಣೆಯನ್ನು ನಿಯಂತ್ರಿಸುವ ಸಲುವಾಗಿ ಸೌದಿ ಸರ್ಕಾರವು ತಾತ್ಕಾಲಿಕ ವೀಸಾ ನಿಷೇಧದ ನಿರ್ಧಾರವನ್ನು ತೆಗೆದುಕೊಂಡಿದೆ. ಈ ವರ್ಷದ ಹಜ್ ಪೂರ್ಣಗೊಳ್ಳುವವರೆಗೆ (ಜೂನ್ ಮಧ್ಯಭಾಗ) ವೀಸಾ ನಿಷೇಧ ಮುಂದುವರಿಯುತ್ತದೆ. ವಿದೇಶಿಯರು ಏ.13 ರವರೆಗೆ ಮಾತ್ರ ಉಮ್ರಾ ವೀಸಾದಲ್ಲಿ ಬರಬಹುದು ಎಂದು ಸೌದಿ ಅಧಿಕಾರಿಗಳು ತಿಳಿಸಿದ್ದಾರೆ.
14 ದೇಶಗಳ ಪಟ್ಟಿ : ಭಾರತ, ಬಾಂಗ್ಲಾದೇಶ, ಪಾಕಿಸ್ತಾನ, ಅಲ್ಜೀರಿಯಾ, ಈಜಿಪ್ಟ್, ಇಥಿಯೋಪಿಯಾ, ಇಂಡೋನೇಷ್ಯಾ, ಇರಾಕ್, ಜೋರ್ಡಾನ್, ಮೊರಾಕೊ, ನೈಜೀರಿಯಾ, ಸುಡಾನ್, ಟುನೀಶಿಯಾ ಮತ್ತು ಯೆಮೆನ್.
ಇನ್ನು ಹಜ್ನಲ್ಲಿ ಸುಗಮ ವ್ಯವಸ್ಥೆ ಕಲ್ಪಿಸಲು ವೀಸಾ ನಿಯಮಗಳನ್ನು ಕಠಿಣಗೊಳಿಸುವಂತೆ ಸೌದಿ ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. 2024ರ ಹಜ್ ಯಾತ್ರೆಯ ಸಮಯದಲ್ಲಿ ಸಾವನ್ನಪ್ಪಿದ ಜನರಲ್ಲಿ ಹೆಚ್ಚಿನವರು ಅನಧಿಕೃತ ಯಾತ್ರಿಕರು. ಈ ಸಮಸ್ಯೆ ಕಡಿವಾಣ ಹಾಕುವ ನಿಟ್ಟಿನಲ್ಲಿ ವೀಸಾ ನೀಡುವುದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.
2024ರ ಹಜ್ ಯಾತ್ರೆಯಲ್ಲಿ 1000ಕ್ಕೂ ಹೆಚ್ಚು ಜನರ ಸಾವು : ಸೌದಿ ಅರೇಬಿಯಾದಲ್ಲಿ ಹೆಚ್ಚಿನ ಉಷ್ಣಾಂಶ, ಬಿಸಿ ಗಾಳಿ, ಹೀಟ್ ಸ್ಟ್ರೋಕ್ ಹಾಗೂ ಕಾಲ್ತುಳಿತದಿಂದಾಗಿ ಕಳೆದ ವರ್ಷ ಹಜ್ ಯಾತ್ರೆಯ ಸಮಯದಲ್ಲಿ 1 ಸಾವಿರಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು. ಮೃತಪಟ್ಟವರಲ್ಲಿ ಹೆಚ್ಚಿನವರು ಈಜಿಪ್ಟಿನವರು. ಹಜ್ ಯಾತ್ರೆ ಕೈಗೊಂಡಿರುವ ಸಾವಿರಾರು ಮಂದಿ ಯಾವುದೇ ನೊಂದಣಿ ಮಾಡಿಸಿಕೊಂಡಿರಲಿಲ್ಲ. ಹೀಗಾಗಿ ಅವರಿಗೆಲ್ಲಾ ವಸತಿ ವ್ಯವಸ್ಥೆ, AC ಸೌಲಭ್ಯ ನೀಡಲು ಸಾಧ್ಯವಾಗಿರಲಿಲ್ಲ. ವಿದೇಶಾಂಗ ವ್ಯವಹಾರಗಳ ಸಂಸ್ಥೆ ಹಜ್ ಸಮಯದಲ್ಲಿ 98 ಭಾರತೀಯ ನಾಗರಿಕರು ಸಾವನ್ನಪ್ಪಿದ್ದರು.
ಇದನ್ನೂ ಓದಿ : ಏಪ್ರಿಲ್ 13ರವರೆಗೂ ವರುಣನ ಆರ್ಭಟ ಫಿಕ್ಸ್ – ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರೀ ಮಳೆ ಸಾಧ್ಯತೆ!
