ಮೈಸೂರು : ಹೊಲದಲ್ಲಿ ಬೆಳೆಗಳಿಗೆ ಔಷಧಿ ಸಿಂಪಡಿಸುತ್ತಿದ್ದ ವೇಳೆ ವಿದ್ಯುತ್ ಸ್ಪರ್ಶಿಸಿ ತಾಯಿ ಮತ್ತು ಮಗ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಹುಣಸೂರು ತಾಲೂಕಿನ ಎಮ್ಮೆಕೊಪ್ಪಲು ಗ್ರಾಮದಲ್ಲಿ ನಡೆದಿದೆ. ನೀಲಮ್ಮ ಮತ್ತು ಆಕೆಯ ಮಗ ಹರೀಶ್ ಮೃತರು.
ನಿನ್ನೆ ಮಧ್ಯಾಹ್ನ ತಾಯಿ ನೀಲಮ್ಮ ಮತ್ತು ಮಗ ಹರೀಶ್ ತಮ್ಮ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದರು. ಅವರು ಕೆಲಸ ಮಾಡುತ್ತಿದ್ದ ಜಮೀನಿನ ಪಕ್ಕದಲ್ಲಿರುವ ಸ್ಮಶಾನಕ್ಕೆ ಅಳವಡಿಸಲಾಗಿದ್ದ ಬೇಲಿಗೆ, ಹೈಟೆನ್ಷನ್ ವಿದ್ಯುತ್ ಸಂಪರ್ಕದ ಗ್ರೌಂಡಿಂಗ್ ತಂತಿಯು ಆಕಸ್ಮಿಕವಾಗಿ ತಾಗಿಕೊಂಡಿತ್ತು.

ಬೆಳೆಗೆ ಔಷಧಿ ಸಿಂಪಡಿಸುವಾಗ ನೀಲಮ್ಮ ಅವರು ಈ ವಿದ್ಯುತ್ ಪ್ರವಹಿಸುತ್ತಿದ್ದ ಬೇಲಿಯ ಬಳಿ ಬಂದಿದ್ದಾರೆ. ಈ ವೇಳೆ ಅವರಿಗೆ ವಿದ್ಯುತ್ ಸ್ಪರ್ಶಿಸಿದೆ. ತಾಯಿಯನ್ನು ರಕ್ಷಿಸಲು ಮಗ ಹರೀಶ್ ಧಾವಿಸಿದಾಗ, ಅವರಿಗೂ ಸಹ ವಿದ್ಯುತ್ ಹರಿದು ಇಬ್ಬರೂ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ರಾತ್ರಿ 8 ಗಂಟೆಯಾದರೂ ತಾಯಿ ಮತ್ತು ಮಗ ಮನೆಗೆ ಹಿಂದಿರುಗದ್ದನ್ನು ಕಂಡು ಕಳವಳಗೊಂಡ ಕುಟುಂಬಸ್ಥರು ಜಮೀನಿಗೆ ಹೋಗಿ ಪರಿಶೀಲಿಸಿದ್ದಾರೆ. ಈ ವೇಳೆ ದುರಂತದ ಘಟನೆ ಬೆಳಕಿಗೆ ಬಂದಿದೆ. ಘಟನೆಯ ಬಗ್ಗೆ ಮಾಹಿತಿ ತಿಳಿದ ಕೂಡಲೇ ವಿದ್ಯುತ್ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ‘ಗತವೈಭವ’ಕ್ಕೆ ರೆಡಿಯಾದ ಸಿಂಪಲ್ ಸುನಿ – ನ.14ಕ್ಕೆ ಸಿನಿಮಾ ಗ್ಯ್ರಾಂಡ್ ರಿಲೀಸ್!







