ದಾವಣಗೆರೆ : ಸಾಲಬಾಧೆ ತಾಳಲಾರದೆ ಯುವ ರೈತನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಜಗಳೂರು ತಾಲೂಕಿನ ಗೊಲ್ಲರಹಟ್ಟಿ ಗ್ರಾಮದಲ್ಲಿ ನಡೆದಿದೆ. ಗೊಲ್ಲರಹಟ್ಟಿ ಗ್ರಾಮದ ವೀರೇಶ್ (36) ಮೃತ ರೈತ.

ಕೃಷಿಯನ್ನೇ ನಂಬಿ ಜೀವನ ನಡೆಸುತ್ತಿದ್ದ ವೀರೇಶ್, ತನ್ನ ವ್ಯವಸಾಯಕ್ಕಾಗಿ ಬ್ಯಾಂಕ್, ಫೈನಾನ್ಸ್ ಸಂಸ್ಥೆಗಳು ಮತ್ತು ಕೈಸಾಲ ಮಾಡಿಕೊಂಡಿದ್ದ. ಆದರೆ, ಕಳೆದ ಕೆಲವು ಸಮಯದಿಂದ ಪ್ರದೇಶದಲ್ಲಿ ಉಂಟಾದ ಅತಿವೃಷ್ಟಿ ಹಾಗೂ ಅನಾವೃಷ್ಟಿಯ ಕಾರಣದಿಂದಾಗಿ ಬೆಳೆ ಸಂಪೂರ್ಣವಾಗಿ ಕೈಕೊಟ್ಟಿತ್ತು. ಬೆಳೆ ಹಾನಿಯಿಂದಾಗಿ ಆದಾಯವಿಲ್ಲದೆ ಸಾಲ ಮರುಪಾವತಿ ಮಾಡುವುದು ವೀರೇಶ್ಗೆ ಕಷ್ಟವಾಗಿತ್ತು. ಈ ನಡುವೆ ಸಾಲಗಾರರು ಹಾಗೂ ಫೈನಾನ್ಸ್ ಸಂಸ್ಥೆಗಳಿಂದ ಸಾಲ ಮರುಪಾವತಿ ಹಾಗೂ ಕಂತು ಕಟ್ಟುವಂತೆ ಒತ್ತಡ ಹಾಕಿದ್ದಾರೆ.

ಸಾಲದ ಶೂಲ ತಾಳಲಾರದೆ ಮನನೊಂದ ವೀರೇಶ್ ಅವರು ತಮ್ಮ ಜಮೀನಿನಲ್ಲಿ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾರೆ. ಈ ಘಟನೆ ಸಂಬಂಧ ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಚಿಕ್ಕಬಳ್ಳಾಪುರ ರೈತರಿಗೆ ಹೈದರಾಬಾದ್ ವ್ಯಾಪಾರಸ್ಥರ ವಂಚನೆ – ಸಚಿವ ಜಮೀರ್ ಕಾರ್ಯಕ್ರಮದಲ್ಲಿ ಹೈಡ್ರಾಮಾ.. ಆತ್ಮಹತ್ಯೆ ಅಳಲು!







