ಚಿಕ್ಕಬಳ್ಳಾಪುರ ರೈತರಿಗೆ ಹೈದರಾಬಾದ್ ವ್ಯಾಪಾರಸ್ಥರ ವಂಚನೆ – ಸಚಿವ ಜಮೀರ್ ಕಾರ್ಯಕ್ರಮದಲ್ಲಿ ಹೈಡ್ರಾಮಾ.. ಆತ್ಮಹತ್ಯೆ ಅಳಲು!

ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರದಲ್ಲಿ ರೈತರಿಗೆ ಕೋಟ್ಯಂತರ ರೂಪಾಯಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಹೈದರಾಬಾದ್‌ನ ವ್ಯಾಪಾರಿಗಳಿಂದ ವಂಚನೆಗೊಳಗಾದ ಸ್ಥಳೀಯ ಜೋಳದ ವ್ಯಾಪಾರಿ ರಾಮಕೃಷ್ಣ ಅವರು, ಸಚಿವ ಜಮೀರ್ ಅಹಮದ್ ಖಾನ್ ಅವರ ಕಾರ್ಯಕ್ರಮದಲ್ಲಿ ಹೈಡ್ರಾಮ ನಡೆಸಿ, ತಮಗೆ ನ್ಯಾಯ ಕೊಡಿಸುವಂತೆ ಆಗ್ರಹಿಸಿದ್ದಾರೆ.

ಚಿಕ್ಕಬಳ್ಳಾಪುರ ನಗರದ ಶಾದಿ ಮಹಲ್‌ನಲ್ಲಿ ಸಚಿವ ಜಮೀರ್ ಅಹಮದ್ ಅವರ ಕಾರ್ಯಕ್ರಮ ನಡೆಯುತ್ತಿದ್ದಾಗ, ಪೆರೇಸಂದ್ರ ಗ್ರಾಮದ ಜೋಳದ ವ್ಯಾಪಾರಿ ರಾಮಕೃಷ್ಣ ಅವರು ಏಕಾಏಕಿ ಸಚಿವರನ್ನು ತಡೆದು ನಿಲ್ಲಿಸಿ, ತನಗೆ ಬರಬೇಕಿರುವ 1.89 ಕೋಟಿ ರೂಪಾಯಿ ಬಾಕಿ ಹಣವನ್ನು ಕೂಡಲೇ ಕೊಡಿಸುವಂತೆ ದುಂಬಾಲು ಬಿದ್ದರು.

ಮೆಕ್ಕೆಜೋಳ ಖರೀದಿಸಿ ಹಣ ನೀಡದೆ ಮೋಸ ಮಾಡಿದ ಹೈದರಾಬಾದ್‌ನ ವ್ಯಾಪಾರಸ್ಥರಿಗೆ ಸಚಿವ ಜಮೀರ್ ಅಹಮದ್ ಅವರು ಸಹಾಯ ಮಾಡುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಇದೀಗ ಸಚಿವರ ಮುಂದೆ ತಮ್ಮ ಅಳಲು ತೋಡಿಕೊಂಡ ರಾಮಕೃಷ್ಣ, ಸಂಜೆಯೊಳಗೆ ತನಗೆ ಪರಿಹಾರ ನೀಡದಿದ್ದರೆ, ಕುಟುಂಬ ಸಮೇತ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು. ಸಚಿವರ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ, ಸ್ಥಳದಲ್ಲಿದ್ದ ಪೊಲೀಸರು ವ್ಯಾಪಾರಿ ರಾಮಕೃಷ್ಣ ಅವರನ್ನು ವಶಕ್ಕೆ ಪಡೆದರು.

ಇದನ್ನೂ ಓದಿ : ಮೊಬೈಲ್ ಕದಿಯಲು ಅಲ್ಯೂಮಿನಿಯಂ ಫಾಯಿಲ್ ಬಳಕೆ – 6 ಮಂದಿ ಖತರ್ನಾಕ್ ಕಳ್ಳರು ಅರೆಸ್ಟ್, 450 ಮೊಬೈಲ್ ವಶಕ್ಕೆ!

Btv Kannada
Author: Btv Kannada

Read More