ಬೆಂಗಳೂರು : ಸ್ಪೀಕರ್ ಯು.ಟಿ. ಖಾದರ್ ಅವರ ಅವಧಿಯಲ್ಲಿ ವಿವಾದ, ಗೊಂದಲ, ಭ್ರಷ್ಟಾಚಾರದ ಆರೋಪಗಳು ಕೇಳಿಬಂದಿವೆ ಎಂದು ಸಂಸದ ಮತ್ತು ರಾಜ್ಯ ವಿಧಾನಸಭೆಯ ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಆರೋಪಿಸಿದ್ದಾರೆ.
ಈ ಬಗ್ಗೆ ವಿಶ್ವೇಶ್ವರ ಹೆಗಡೆ ಮಾತನಾಡಿ, ವಿಧಾನಸಭೆ ಆಡಳಿತ ಸುಧಾರಣೆ ಮತ್ತು ಅಭಿವೃದ್ಧಿ ಹೆಸರಲ್ಲಿ ದೊಡ್ಡಮಟ್ಟದ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಈ ಬಗ್ಗೆ ಹಾಲಿ ನ್ಯಾಯಾಧೀಶರಿಂದ ತನಿಖೆ ಆಗಬೇಕು. ಜೊತೆಗೆ ಭ್ರಷ್ಟಾಚಾರ ಬಗ್ಗೆ ರಾಜ್ಯಪಾಲರಿಗೆ ಪತ್ರದ ಮೂಲಕ ಗಮನಕ್ಕೆ ತರುತ್ತೇನೆ. ಸ್ಪೀಕರ್ ಕೂಡ RTI ವ್ಯಾಪ್ತಿಗೆ ಬರಬೇಕು. ವಿಧಾನಸಭೆಯ ಹಗರಣ ಕುರಿತು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ. ಖಾದರ್ ಅವರನ್ನು ‘ಲೂಟಿ ಖಾದರ್’ ಎಂದು ಕರೆಯುವ ಮಟ್ಟಕ್ಕೆ ವ್ಯವಸ್ಥೆ ಬಂದಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಅವರು ಕೇವಲ ಯು.ಟಿ.ಖಾದರ್ ಅಲ್ಲ. ವಿಧಾನಸಭೆಯ ಸಭಾಧ್ಯಕ್ಷರು. ಅವರು ಸಭಾಧ್ಯಕ್ಷರ ಪೀಠದ ಪಾವಿತ್ರ್ಯತೆ ಗೌರವ, ಘನತೆ ಹೆಚ್ಚಿಸಬೇಕು. ಇಂತಹ ಪೀಠದ ಮೇಲೆ ಆರೋಪಗಳು ಕೇಳಿ ಬರುತ್ತಿರುವುದರಿಂದ ಆರೋಪಗಳಿಂದ ಪೀಠ ಮುಕ್ತವಾಗಲಿ ಎಂದು ನಾನು ಈ ವಿಚಾರಗಳನ್ನು ಹೇಳುತ್ತಿದ್ದೇನೆ. ಈ ಸಂಬಂಧ ರಾಜ್ಯಪಾಲರಿಗೆ ಪತ್ರ ನೀಡುತ್ತೇನೆ. ಇದನ್ನು ಖಾದರ್ ಸವಾಲಾಗಿ ಸ್ವೀಕರಿಸಿ ಸ್ವಯಂ ಪ್ರೇರಿತವಾಗಿ ತನಿಖೆಗೆ ಸೂಚಿಸಿ ಆರೋಪ ಮುಕ್ತರಾಗುವತ್ತ ಹೆಜ್ಜೆ ಇಡಬೇಕು. ಖಾದರ್ ಅವರ ಅವಧಿಯಲ್ಲಿ ವಿವಾದ, ಗೊಂದಲ, ಭ್ರಷ್ಟಾಚಾರದ ಆರೋಪಗಳು ಕೇಳಿ ಬಂದಿರುವುದರಿಂದ ಹಾಲಿ ನ್ಯಾಯಮೂರ್ತಿಗಳಿಂದ ನ್ಯಾಯಾಂಗ ತನಿಖೆ ನಡೆಸಬೇಕು. ಸ್ಪೀಕರ್ ಸ್ಥಾನದ ವಿರುದ್ಧ ಬಂದಿರುವ ಆರೋಪಿಗಳಿಂದ ಆ ಸ್ಥಾನವು ಮುಕ್ತವಾಗಬೇಕು. ಸ್ಪೀಕರ್ ಕಚೇರಿ ಟೆಂಡರ್ ಮಂಗಳೂರು ಮೂಲದವರಿಗೇ ಏಕೆ ಸಿಗುತ್ತಿದೆ? ಅದೂ ಕೆಲವರಿಗೇ ಏಕೆ ಸಿಗುತ್ತಿದೆ? ವಿಧಾನಸಭಾಧ್ಯಕ್ಷರ ಸಚಿವಾಲಯದ ಅಧಿಕಾರಿಗಳ ಅಭಿಪ್ರಾಯ ಏನಿತ್ತು ಎಂದು ಪ್ರಶ್ನಿಸಿದರು.
ನನಗೆ ಗೊತ್ತಿರುವ ಪ್ರಕಾರ ಹಣಕಾಸು ಇಲಾಖೆ ಖರೀದಿಗಳನ್ನು ತಿರಸ್ಕರಿಸಿದೆ. ಬಳಿಕ ಹಣಕಾಸು ಇಲಾಖೆ ಹೊಣೆ ಹೊತ್ತ ಮುಖ್ಯಮಂತ್ರಿಗಳೇ ಒಪ್ಪಿಗೆ ಕೊಡಿಸಿದ ಆರೋಪವಿದೆ. ಖಾದರ್ ಅವರಿಗೆ ಸ್ವತಃ ಸಿಎಂ ಅವರೇ ಬೆಂಬಲ ಕೊಟ್ಟ ಆಕ್ಷೇಪವಿದೆ. ತುರ್ತಾಗಿ ಖರೀದಿ ಮಾಡಬೇಕಾದ ಕೆಲಸ ಏನಿತ್ತು? ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ಕೇಳಿದರು.
ಇದನ್ನೂ ಓದಿ : DJ ಹಳ್ಳಿ ಇನ್ಸ್ಪೆಕ್ಟರ್ ಖೆಡ್ಡಾಗೆ ಕೆಡವಿದ್ದ ‘ಹನಿ’ರಾಣಿಗೆ ಸಂಕಷ್ಟ – ಐನಾತಿ ಆಯೇಷಾ ವಿರುದ್ಧ FIR ದಾಖಲು!







