ದೊಡ್ಡಬಳ್ಳಾಪುರ : ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಇಂದು ಬೆಳ್ಳಂಬೆಳಗ್ಗೆ ಸಂಭವಿಸಿದ ಭೀಕರ ಹಿಟ್ ಅಂಡ್ ರನ್ ಅಪಘಾತದಲ್ಲಿ ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ವರದಿಯಾಗಿದೆ.

ದೊಡ್ಡಬಳ್ಳಾಪುರ ತಾಲ್ಲೂಕಿನ ರಾಮಯ್ಯನಪಾಳ್ಯದ ಬಳಿ ಈ ದುರ್ಘಟನೆ ಸಂಭವಿಸಿದ್ದು, ಮೃತರನ್ನು ಚಿಕ್ಕತಿಮ್ಮನಹಳ್ಳಿ ನಿವಾಸಿಗಳಾದ ನಂದನ್ ಕುಮಾರ್ (22) ಮತ್ತು ರವಿಕುಮಾರ್ (24) ಎಂದು ಗುರುತಿಸಲಾಗಿದೆ. ಮೃತ ನಂದನ್ ಕುಮಾರ್ ಮತ್ತು ರವಿಕುಮಾರ್ ಅವರು ಪ್ರತಿದಿನದಂತೆ ಇಂದು ಬೆಳಗಿನ ಜಾವ ತಮ್ಮ ಗ್ರಾಮದಿಂದ ದೊಡ್ಡಬಳ್ಳಾಪುರ ನಗರಕ್ಕೆ ಕೆಲಸಕ್ಕೆಂದು ಹೊರಟಿದ್ದರು.

ಈ ವೇಳೆ ರಾಮಯ್ಯನಪಾಳ್ಯದ ಬಳಿ ವೇಗವಾಗಿ ಬಂದ ಅಜ್ಞಾತ ವಾಹನವೊಂದು ಅವರಿಗೆ ಅಪ್ಪಳಿಸಿ ನಿಲ್ಲಿಸದೆ ಪರಾರಿಯಾಗಿದೆ.ಅಪಘಾತದ ತೀವ್ರತೆಗೆ ಯುವಕರಿಬ್ಬರೂ ತೀವ್ರ ರಕ್ತಸ್ರಾವಕ್ಕೆ ಒಳಗಾಗಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಸ್ಥಳೀಯರು ಮತ್ತು ಪೊಲೀಸರು ಮಾಹಿತಿ ತಿಳಿದ ಕೂಡಲೇ ಧಾವಿಸಿದ್ದಾರೆ.

ಘಟನಾ ಸ್ಥಳಕ್ಕೆ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಿಟ್ ಅಂಡ್ ರನ್ ಮಾಡಿದ ವಾಹನ ಮತ್ತು ಚಾಲಕನಿಗಾಗಿ ಹುಡುಕಾಟ ನಡೆಸುತ್ತಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಇದನ್ನೂ ಓದಿ : ಲವ್ವರ್ಗಾಗಿ ಐ-ಫೋನ್ ಕದಿಯುತ್ತಿದ್ದ ಪ್ರೇಮಿ ಅರೆಸ್ಟ್ – ಶೋರೂಮ್ಗಳಿಗೆ ಕನ್ನ ಹಾಕಿದ್ದ 30 ಲಕ್ಷ ಮೌಲ್ಯದ 28 ಮೊಬೈಲ್ ಸೀಜ್!







