ಬೆಂಗಳೂರು : ಇತ್ತೀಚೆಗೆ ಆಂಧ್ರ ಪ್ರದೇಶದ ಕರ್ನೂಲ್ ಬಳಿ ನಡೆದ ಬಸ್ ದುರಂತದ ಹಿನ್ನೆಲೆಯಲ್ಲಿ ಎಚ್ಚೆತ್ತಿರುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC), ತನ್ನ ಬಸ್‌ಗಳಲ್ಲಿ ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಕಟ್ಟುನಿಟ್ಟಿನ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಆದೇಶಿಸಿದೆ. ಈ ಕುರಿತು ಸಂಸ್ಥೆಯು ಎಲ್ಲಾ ಡಿಪೋ ಮ್ಯಾನೇಜರ್‌ಗಳಿಗೂ ನಿರ್ದಿಷ್ಟ ಸೂಚನೆಗಳನ್ನು ನೀಡಿದ್ದಾರೆ.

ಪ್ರಯಾಣಿಕರ ಜೀವ ಮತ್ತು ಹಿತಾಸಕ್ತಿಯನ್ನು ಕಾಯುವ ನಿಟ್ಟಿನಲ್ಲಿ, BMTCಯು ತನ್ನ ಡಿಪೋ ಮ್ಯಾನೇಜರ್‌ಗಳು ತಪ್ಪದೇ ಈ ಕೆಳಗಿನ ಅಂಶಗಳನ್ನು ಖಚಿತಪಡಿಸಿಕೊಳ್ಳಲು ಆದೇಶಿಸಿದೆ. ಪ್ರತಿ ಬಸ್‌ನಲ್ಲಿ ಫೈರ್ ಎಕ್ಸ್‌ಟಿಂಗ್ವಿಷರ್ ಇರುವುದು ಕಡ್ಡಾಯ. ಬೆಂಕಿ ಅನಾಹುತದಂತಹ ತುರ್ತು ಪರಿಸ್ಥಿತಿಯಲ್ಲಿ ತಕ್ಷಣ ಬಳಸಲು ಇದು ಸಿದ್ಧವಾಗಿರಬೇಕು.

ಬಸ್‌ನಲ್ಲಿ ಫಸ್ಟ್ ಆ್ಯಡ್ ಬಾಕ್ಸ್ ಮತ್ತು ಅದರಲ್ಲಿ ಅಗತ್ಯವಿರುವ ಔಷಧಿಗಳು ಇರುವುದನ್ನು ಖಾತರಿಪಡಿಸಬೇಕು. ಸಣ್ಣಪುಟ್ಟ ಗಾಯಗಳು ಅಥವಾ ಆರೋಗ್ಯ ಸಮಸ್ಯೆಗಳಿಗೆ ತಕ್ಷಣ ಚಿಕಿತ್ಸೆ ನೀಡಲು ಇದು ಅಗತ್ಯ. ಬಸ್‌ಗಳ ಎಮರ್ಜೆನ್ಸಿ ಡೋರ್ ಯಾವುದೇ ಅಡೆತಡೆಯಿಲ್ಲದೆ, ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಚಾಲಕರ ಮತ್ತು ಪ್ರಯಾಣಿಕರ ಪ್ರವೇಶ/ನಿರ್ಗಮನ ದ್ವಾರಗಳು ಸರಿಯಾಗಿ ಕೆಲಸ ಮಾಡುತ್ತಿರುವುದನ್ನು ಖಚಿತಪಡಿಸಿಕೊಳ್ಳಬೇಕು.

ಎಸಿ ಮತ್ತು ವೋಲ್ವೋ ಬಸ್‌ಗಳಲ್ಲಿ, ತುರ್ತು ಪರಿಸ್ಥಿತಿಯಲ್ಲಿ (Emergency) ಕಿಟಕಿ ಗ್ಲಾಸ್ ಒಡೆದು ಹೊರಬರಲು ಅನುಕೂಲವಾಗುವಂತೆ ಸುತ್ತಿಗೆಯನ್ನು ಕಡ್ಡಾಯವಾಗಿ ಇಡಬೇಕು. ಈ ಕಟ್ಟುನಿಟ್ಟಿನ ಕ್ರಮಗಳ ಮೂಲಕ, BMTCಯು ತಮ್ಮ ಸೇವೆಗಳನ್ನು ಬಳಸುವ ಪ್ರಯಾಣಿಕರ ಸುರಕ್ಷತೆ ಮತ್ತು ವಿಶ್ವಾಸವನ್ನು ಹೆಚ್ಚಿಸಲು ಮುಂದಾಗಿದೆ. ಪ್ರಯಾಣಿಕರ ಹಿತವನ್ನು ಕಾಪಾಡುವುದು ತಮ್ಮ ಆದ್ಯತೆ ಎಂದು ಸಂಸ್ಥೆ ತಿಳಿಸಿದೆ.
ಇದನ್ನೂ ಓದಿ : ಕುಡಿದ ಮತ್ತಲ್ಲಿ ತಾಯಿಗೆ ಬೈದಿದ್ದಕ್ಕೆ ಸಂಬಂಧಿ ಕಗ್ಗೊಲೆ -ಕಬ್ಬಿಣದ ರಾಡ್ನಿಂದ ಅವಿನಾಶ್ ಕೊಲೆ ಮಾಡಿದ ಕಾರ್ತಿಕ್!







