ಮೂಡುಬಿದಿರೆ: ಕರಾವಳಿ ಭಾಗದಲ್ಲಿ ‘ಸ್ಟೆರ್‌ಲೈಟ್’ ಎಂಬ ಖಾಸಗಿ ಕಂಪನಿ ಗೂಂಡಾಗಿರಿ ನಡೆಸಿ ಕೋಟ್ಯಂತರ ಮೌಲ್ಯದ ಕೃಷಿ ಜಮೀನನ್ನು ನಾಶ ಮಾಡಿದೆ. 440 ಕೆವಿ ವಿದ್ಯುತ್ ಲೈನ್ ಕಾಮಗಾರಿಯ ನೆಪದಲ್ಲಿ ಖಾಸಗಿ ಕಂಪನಿ ‘ಸ್ಟೆರ್‌ಲೈಟ್’ ರೈತರ ಕೃಷಿ ಭೂಮಿಯ ಮೇಲೆ ದೌರ್ಜನ್ಯ ಎಸಗಿದ್ದು ಕರಾವಳಿ ಭಾಗದ ರೈತರು ಬೃಹತ್ ಪ್ರತಿಭಟನೆ ನಡೆಸಿದರು.
ಮೂಡುಬಿದಿರೆಯ ತೆಂಕಮಿಜಾರು ಗ್ರಾಮದ ಅಶ್ವಥಪುರದಲ್ಲಿ ಈ ಘಟನೆ ನಡೆದಿದೆ. ಉಡುಪಿ-ಕಾಸರಗೋಡು ನಡುವೆ ಹಾದು ಹೋಗುವ 440 ಕೆವಿ ವಿದ್ಯುತ್ ಲೈನ್ ಕಾಮಗಾರಿಗಾಗಿ ‘ಸ್ಟೆರ್‌ಲೈಟ್’ ಕಂಪನಿಯು ರೈತರಿಗೆ ಯಾವುದೇ ಮಾಹಿತಿ ಅಥವಾ ನೋಟಿಸ್ ನೀಡದೆ, ಏಕಾಏಕಿ ಜೆಸಿಬಿಗಳ ಮೂಲಕ ಬೆಳೆದು ನಿಂತಿದ್ದ ಬಾಳೆ, ಅಡಕೆ ಸೇರಿದಂತೆ ಇತರೆ ಬೆಳೆಗಳು ಹಾಗೂ ಕೃಷಿ ಭೂಮಿಯನ್ನು ನಾಶಪಡಿಸಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಖಾಸಗಿ ಕಂಪನಿಯ ಗೂಂಡಾಗಿರಿ ಮತ್ತು ದೌರ್ಜನ್ಯದ ವಿರುದ್ಧ ಭಾರತೀಯ ಕಿಸಾನ್ ಸಂಘದ ನೇತೃತ್ವದಲ್ಲಿ ಸಾವಿರಾರು ಸ್ಥಳೀಯರು ಮತ್ತು ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದರು. ಭೂಮಿ ಕಳೆದುಕೊಂಡ ಕೃಷಿ ಭಾಸ್ಕರ್ ಶೆಟ್ಟಿ ಅವರ ಜಾಗದಲ್ಲೇ ಪ್ರತಿಭಟನೆ ನಡೆಸಿ, ‘ಸ್ಟೆರ್‌ಲೈಟ್’ ಕಂಪನಿಯ ರೈತ ವಿರೋಧಿ ನೀತಿ ಹಾಗೂ ಸರ್ಕಾರದ ಕ್ರಮದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.

ಭಾರತೀಯ ಕಿಸಾನ್ ಸಂಘದ ಮಾಜಿ ಜಿಲ್ಲಾಧ್ಯಕ್ಷ ಶಾಂತಿ ಪ್ರಸಾದ್ ಮಾತನಾಡಿ, “ಮೂಡುಬಿದಿರೆ ಭಾಗದಲ್ಲಿ ಕೃಷಿಕರ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದ್ದು, ಸರ್ಕಾರದ ಜನ ವಿರೋಧಿ ಯೋಜನೆಗಳಿಂದ ರೈತರು ಸಂಕಷ್ಟದಲ್ಲಿದ್ದಾರೆ. ಕರೆಂಟ್ ವೈರ್ ಹಾದು ಹೋಗುವ ರೈತರಿಗೆ ನೋಟಿಸ್ ಆಗಲಿ, ಪರಿಹಾರವಾಗಲಿ ನೀಡಿಲ್ಲ. ಪೊಲೀಸ್ ವ್ಯವಸ್ಥೆ ಬಳಸಿಕೊಂಡು ನಮ್ಮ ಭೂಮಿಯನ್ನು ಕಸಿಯುತ್ತಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಮ್ಮ ಹೋರಾಟಕ್ಕೆ ಸರ್ಕಾರ ಸ್ಪಂದಿಸದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಪ್ರತಿಭಟನಾ ನಿರತ ರೈತರು ಎಚ್ಚರಿಕೆ ನೀಡಿದ್ದಾರೆ. ಈ ಸಂದರ್ಭದಲ್ಲಿ ತೆಂಕಮಿಜಾರು ಗ್ರಾಪಂ ಮಾಜಿ ಅಧ್ಯಕ್ಷ ಬಾಲಕೃಷ್ಣ ದೇವಾಡಿಗ, ವಸಂತ್ ಭಟ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಇದನ್ನೂ ಓದಿ : ನಟ ಕೋಮಲ್ ಅಭಿನಯದ ‘ಕೋಣ’ ಸಿನಿಮಾಗೆ U/A ಸರ್ಟಿಫಿಕೇಟ್ – ತನಿಷಾ ಕುಪ್ಪಂಡ ನಾಯಕಿ & ನಿರ್ಮಾಣದ ಚಿತ್ರ ಅ.31ಕ್ಕೆ ತೆರೆಗೆ!







