ಬೆಂಗಳೂರು : ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ (KSCPCR) ಅಧ್ಯಕ್ಷರಾಗಿದ್ದ ಕೆ. ನಾಗಣ್ಣಗೌಡ ಅವರ 3 ವರ್ಷಗಳ ಅವಧಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಅವರನ್ನು ಹುದ್ದೆಯಿಂದ ಬಿಡುಗಡೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಮಂಡ್ಯ ಮೂಲದ ಕೆ. ನಾಗಣ್ಣಗೌಡ ಅವರನ್ನು ದಿನಾಂಕ 21/10/2022 ರನ್ವಯ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು. ಈ ನೇಮಕಾತಿಯು ದಿನಾಂಕ 21/10/2022ರಿಂದ ಜಾರಿಗೆ ಬರುವಂತೆ 3 ವರ್ಷಗಳ ಅವಧಿಗೆ ಇತ್ತು. ಪ್ರಸ್ತುತ, ಅವರ 3 ವರ್ಷಗಳ ಅವಧಿಯು ಯಶಸ್ವಿಯಾಗಿ ಪೂರ್ಣಗೊಂಡಿರುವುದರಿಂದ, 2025 ರ ಅ.20 ರಿಂದ ಕೆ. ನಾಗಣ್ಣಗೌಡ ಅವರನ್ನು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಸ್ಥಾನದಿಂದ ಬಿಡುಗಡೆಗೊಳಿಸಲಾಗಿದೆ.

ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ‘ಕೇಂದ್ರ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧಿನಿಯಮ 2005’ರ ಪರಿಚ್ಛೇದ 18 ಮತ್ತು ‘ಕರ್ನಾಟಕ ರಾಜ್ಯ ಮಕ್ಕಳ ಆಯೋಗದ ನಿಯಮ 2010’ರ ನಿಯಮ 3 ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ರಚಿಸಲಾದ ಪ್ರಮುಖ ಸಂಸ್ಥೆಯಾಗಿದೆ. ಮುಂದಿನ ಅಧ್ಯಕ್ಷರ ನೇಮಕಾತಿ ಪ್ರಕ್ರಿಯೆ ಶೀಘ್ರದಲ್ಲಿಯೇ ಪ್ರಾರಂಭವಾಗುವ ಸಾಧ್ಯತೆ ಇದೆ.
ಇದನ್ನೂ ಓದಿ : ಟೀಸರ್ನಲ್ಲೇ ಕುತೂಹಲ ಮೂಡಿಸಿದೆ ಅರ್ಜುನ್ ಯೋಗಿ ನಟನೆಯ “ವರ್ಣ” ಸಿನಿಮಾ!







