ಗುಂಡಿ ತಪ್ಪಿಸಲು ಹೋಗಿ ಬೈಕ್‌ನಿಂದ ರಸ್ತೆಗೆ ಬಿದ್ದ ಟೆಕ್ಕಿ – ಲಾರಿ ಹರಿದು ಯುವತಿ ಸಾವು!

ಬೆಂಗಳೂರು : ರಸ್ತೆ ಗುಂಡಿಗಳ ಸಮಸ್ಯೆಯಿಂದಾಗಿ ಬೆಂಗಳೂರಿನಲ್ಲಿ ಮತ್ತೊಂದು ಜೀವ ಬಲಿಯಾಗಿದೆ. ರಸ್ತೆಯಲ್ಲಿನ ಗುಂಡಿಯನ್ನು ತಪ್ಪಿಸಲು ಹೋಗಿ ಟೆಕ್ಕಿ ಸಾವನ್ನಪ್ಪಿರುವ ಘಟನೆ ಮಾದನಾಯಕನಹಳ್ಳಿ ಹುಸ್ಕೂರು ಎಪಿಎಂಸಿ ಬಳಿ ನಡೆದಿದೆ. ಪ್ರಿಯಾಂಕ ಅಪಘಾತದಲ್ಲಿ ಮೃತಪಟ್ಟ ಯುವತಿ.

ಮಾದವಾರಕ್ಕೆ ತೆರಳುತ್ತಿದ್ದ ಯುವತಿ ಪ್ರಿಯಾಂಕ ತಮ್ಮ ಅಣ್ಣನ ಜೊತೆ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿದ್ದರು. ಎಪಿಎಂಸಿ ಹುಸ್ಕೂರು ರಸ್ತೆಯಿಂದ ಮಾದವರದ ಕಡೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಈ ದುರಂತ ಸಂಭವಿಸಿದೆ. ರಸ್ತೆ ಕಾಮಗಾರಿ ನಡೆಯುತ್ತಿದ್ದ ಕಾರಣ ಎಪಿಯಂಸಿ ರಸ್ತೆ ಸಂಪೂರ್ಣ ಹದಗೆಟ್ಟಿತ್ತು.

ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ಪ್ರಿಯಾಂಕ ಅವರ ಸಹೋದರರು, ರಸ್ತೆಯಲ್ಲಿನ ದೊಡ್ಡ ಗುಂಡಿಯನ್ನು ತಪ್ಪಿಸಲು ಪ್ರಯತ್ನಿಸಿದ್ದಾರೆ. ಈ ವೇಳೆ ದ್ವಿಚಕ್ರ ವಾಹನದಿಂದ ನಿಯಂತ್ರಣ ತಪ್ಪಿ, ಸಹೋದರನ ಹಿಂದೆ ಕುಳಿತಿದ್ದ ಟೆಕ್ಕಿ ಪ್ರಿಯಾಂಕ ರಸ್ತೆಗೆ ಬಿದ್ದಿದ್ದಾರೆ. ದುರದೃಷ್ಟವಶಾತ್, ಅದೇ ಸಮಯದಲ್ಲಿ ಹಿಂದಿನಿಂದ ಬಂದ ಕ್ಯಾಂಟರ್ ಲಾರಿ ಯುವತಿಯ ಮೇಲೆ ಹರಿದಿದೆ. ಅಪಘಾತದಲ್ಲಿ ಪ್ರಿಯಾಂಕ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಈ ಘಟನೆ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ಸ್ನೇಹಿತೆಯ ಪ್ರೈವೇಟ್ ವಿಡಿಯೋ ಕದ್ದು ಬ್ಲ್ಯಾಕ್​ಮೇಲ್​ಗೆ ಪ್ರಚೋದನೆ – ಕಿರುತೆರೆ ನಟಿ ಆಶಾ ಜೋಯಿಸ್ ವಿರುದ್ಧ FIR!

Btv Kannada
Author: Btv Kannada

Read More