ಹೈದರಾಬಾದ್ : ಹೈದರಾಬಾದ್ನಿಂದ ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್ ಹೊತ್ತಿ ಉರಿದಿದ್ದು, ಬಸ್ನಲ್ಲಿದ್ದ 20ಕ್ಕೂ ಹೆಚ್ಚು ಮಂದಿ ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿ ಇಂದು ನಸುಕಿನ ಜಾವ ಈ ದುರಂತ ಸಂಭವಿಸಿದೆ.

ಕರ್ನೂಲ್ ಉಪನಗರ ಚಿನ್ನಟೇಕೂರಿನಲ್ಲಿ ರಾಷ್ಟ್ರೀಯ ಹೆದ್ದಾರಿ 44 ರಲ್ಲಿ ವೇಮುರಿ ಕಾವೇರಿ ಟ್ರಾವೆಲ್ಸ್ಗೆ ಸೇರಿದ ಬಸ್ ಬೆಂಕಿಗಾಹುತಿಯಾಗಿದೆ. ಕರ್ನೂಲು ಜಿಲ್ಲೆಯ ಚಿನ್ನ ಟೇಕೂರು ಗ್ರಾಮದ ಬಳಿ ಬಸ್, ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ಸಂಪೂರ್ಣ ಹೊತ್ತಿ ಉರಿದಿದೆ. ಅವಘಡದಲ್ಲಿ ಬಸ್ನಲ್ಲಿ ಮಲಗಿದ್ದಲ್ಲೇ 20ಕ್ಕೂ ಹೆಚ್ಚು ಮಂದಿ ಜೀವ ಬಿಟ್ಟಿದ್ದಾರೆ. ಬಸ್ನಲ್ಲಿ 40 ಜನರು ಇದ್ದು, 20ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.
ಕೆಲ ಪ್ರಯಾಣಿಕರು ಬಸ್ನ ಗಾಜುಗಳನ್ನು ಒಡೆದು ಪ್ರಾಣ ಉಳಿಸಿಕೊಂಡಿದ್ದಾರೆ. ಗಾಯಾಳುಗಳನ್ನು ಕರ್ನೂಲು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇಬ್ಬರು ಚಾಲಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ, NDRF ಸಿಬ್ಬಂದಿ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದೆ.

ಸ್ಥಳಕ್ಕೆ ಕರ್ನೂಲು ಎಸ್ಪಿ ವಿಕ್ರಾಂತ್ ಪಾಟೀಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದುರಂತಕ್ಕೆ ಆಂಧ್ರಪ್ರದೇಶ ಸಿಎಂ ಎನ್. ಚಂದ್ರಬಾಬು ನಾಯ್ಡು ಸಂತಾಪ ಸೂಚಿಸಿದ್ದಾರೆ. ಮೃತರ ಕುಟುಂಬಗಳಿಗೆ ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಇದನ್ನೂ ಓದಿ : ಶೃಂಗೇರಿ ಶಾಖಾ ಮಠದ ಶಿವಗಂಗೆ ಶ್ರೀ ಪುರುಷೋತ್ತಮ ಭಾರತೀ ಮಹಾಸ್ವಾಮಿಗಳು ವಿಧಿವಶ!







