ಗುರು ರಾಯರ ದರ್ಶನ ಬಳಿಕ ಡಿಕೆಶಿ ತುಲಾಭಾರ; ಮನದ ಹರಿಕೆ ತೀರಿಸಿದ ಡಿಸಿಎಂ ಡಿ.ಕೆ.ಶಿವಕುಮಾರ್

ರಾಯಚೂರು : ಕರ್ನಾಟಕದ ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಅವರು ಇಂದು ರಾಯಚೂರು ಜಿಲ್ಲೆಯ ಮಂತ್ರಾಲಯದಲ್ಲಿರುವ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಮಠಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಇದೇ ವೇಳೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಮಠದಲ್ಲಿ ಬೆಲ್ಲದ ತುಲಾಭಾರ ಸೇವೆಯನ್ನು ನೆರವೇರಿಸಿದರು.

ಹಲವು ದಿನಗಳಿಂದ ಮನಸ್ಸಿನಲ್ಲಿದ್ದ ಇಷ್ಟಾರ್ಥ ಸಿದ್ಧಿಗಾಗಿ ಮತ್ತು ಹರಿಕೆಯನ್ನು ತೀರಿಸಲು ಅವರು ಈ ಧಾರ್ಮಿಕ ವಿಧಿಯನ್ನು ಆಚರಿಸಿದರು. ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಮೂಲ ಬೃಂದಾವನದ ದರ್ಶನ ಪಡೆದ ಡಿಕೆಶಿ ಅವರು ಮಠದ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿ ಅವರಿಂದ ಆಶೀರ್ವಾದ ಪಡೆದರು. ಡಿಕೆಶಿ ಅವರು ಪತ್ನಿ ಉಷಾ ಅವರೊಂದಿಗೆ ಭೇಟಿ ನೀಡಿ ಪೂಜಾ ಕೈಂಕರ್ಯಗಳಲ್ಲಿ ಭಾಗಿಯಾದರು.

ಇತ್ತೀಚೆಗೆ ರಾಜ್ಯ ರಾಜಕಾರಣದಲ್ಲಿ ನಡೆಯುತ್ತಿರುವ ಹಲವು ಬೆಳವಣಿಗೆಗಳ ಹಾಗೂ ಮುಖ್ಯಮಂತ್ರಿ ಹುದ್ದೆಯ ಚರ್ಚೆಯ ಹಿನ್ನೆಲೆಯಲ್ಲಿ ಡಿಸಿಎಂ ಅವರ ಈ ಮಂತ್ರಾಲಯ ಭೇಟಿ ಮತ್ತು ಹರಿಕೆ ತೀರಿಸುವ ತುಲಾಭಾರ ಸೇವೆ ಕುತೂಹಲ ಮೂಡಿಸಿದೆ. ಗುರು ರಾಯರ ಆಶೀರ್ವಾದದೊಂದಿಗೆ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಅವರು ಮೊರೆ ಹೋಗಿದ್ದಾರೆ ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.

ಇದನ್ನು ಓದಿ : ದೀಪಾವಳಿ ಹಬ್ಬದ ಸಂದರ್ಭದಲ್ಲಿ ಬಿಡುಗಡೆಯಾಯಿತು “ಫಸ್ಟ್ ಸ್ಯಾಲರಿ” ಕಿರುಚಿತ್ರದ ಪೋಸ್ಟರ್

Btv Kannada
Author: Btv Kannada

Read More