ಮೈಸೂರು : ಮೈಸೂರು ಡಯೋಸೆನ್ ಎಜುಕೇಷನಲ್ ಸೊಸೈಟಿಯ ಕರ್ಮಕಾಂಡವೊಂದು ಬಟಾ ಬಯಲಾಗಿದೆ. ದಕ್ಷಿಣ ಕ್ರೈಸ್ತ ಧರ್ಮ ಪ್ರಾಂತ್ಯದ ಆಡಳಿತಾಧಿಕಾರಿ ಕಾನೂನು ಮೀರಿದ ಆದೇಶ ಹೊರಡಿಸಿದ್ದಾರೆ. ಶಾಲಾ ಸಮವಸ್ತ್ರ, ಬ್ಯಾಗ್ ಪುಸ್ತಕ ಖರೀದಿಗೆ ನಿರ್ದಿಷ್ಟ ಏಜೆನ್ಸಿಗಳು ಫಿಕ್ಸ್ ಮಾಡಿದ್ದು, ಆ ನಿರ್ದಿಷ್ಟ ಏಜೆನ್ಸಿಗಳ ಮೂಲಕವೇ ಎಲ್ಲವನ್ನು ಖರೀದಿಸುವಂತೆ ಫಲಿತಾಂಶ ಬಂದ ದಿನವೇ ಪೋಷಕರಿಗೆ ತಾಕೀತು ಮಾಡಿದ್ದಾರೆ.
ದುಪ್ಪಟ್ಟು ಹಣ ಕೊಟ್ಟು ಬ್ಯಾಗ್, ಸಮವಸ್ತ್ರ, ಪುಸ್ತಕ ಖರೀದಿಸುವಂತೆ ಮೈಸೂರು ಡಯೋಸೆನ್ ಎಜುಕೇಷನಲ್ ಸೊಸೈಟಿ ಪೋಷಕರಿಗೆ ಬಲವಂತ ಮಾಡಿದ್ದು, ಈ ಸೊಸೈಟಿ ಶಿಕ್ಷಣ ಇಲಾಖೆ ನಿಯಮಗಳನ್ನ ಗಾಳಿಗೆ ತೂರಿದೆ.
ಮೈಸೂರು ಡಯೋಸೆನ್ ಎಜುಕೇಷನಲ್ ಸೊಸೈಟಿ ಅಧೀನದಲ್ಲಿ 193 ಶಾಲೆಗಳಿವೆ. ಈ ಶಾಲೆಗಳಲ್ಲಿ ಓದುವ ವಿದ್ಯಾರ್ಥಿಗಳ ಮೇಲೆ ದೊಡ್ಡ ಹೊರೆಬಿದ್ದಿದೆ. ಆಡಳಿತಾಧಿಕಾರಿ ಡಾ. ಬರ್ನಾರ್ಡ್ ಮೊರಸ್ ಕಾನೂನು ಉಲ್ಲಂಘಿಸಿ ಆದೇಶ ನೀಡಿದ್ದು, ಇದನ್ನು ಪ್ರಶ್ನೆ ಮಾಡಿದ ವಿದ್ಯಾರ್ಥಿಗಳಿಗೆ ಈ ಶಿಕ್ಷಣ ಸಂಸ್ಥೆಗಳಲ್ಲಿ ಗೇಟ್ ಪಾಸ್ ನೀಡಿದೆ. ಕಿಕ್ ಬ್ಯಾಕ್ ಆಸೆಗೆ ಬಿದ್ದು ಆಡಳಿತಾಧಿಕಾರಿಯಿಂದ ನಿಯಮ ಮೀರಿದ ಆದೇಶವೆಂದು ಪೋಷಕರು ದೂರು ಸಲ್ಲಿಸಿದ್ದಾರೆ.
ಮೈಸೂರು ಡಯೋಸೆನ್ ಎಜುಕೇಷನಲ್ ಸೊಸೈಟಿಯ ಶಿಕ್ಷಣ ಸಂಸ್ಥೆಗಳು ಮೈಸೂರು, ಮಂಡ್ಯ, ಕೊಡಗು, ಹಾಸನ ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿದ್ದು, ಇದೀಗ ಚಾಮರಾಜನಗರ ಡಿಡಿಪಿಐಗೆ ಪೋಷಕರು ದಾಖಲೆ ಸಹಿತ ದೂರು ನೀಡಿದ್ದಾರೆ. ದೂರಿನ ಕುರಿತು ತನಿಖೆ ನಡೆಸಿ ವರದಿ ನೀಡುವಂತೆ ಡಿಡಿಪಿಐ, ಬಿಇಓಗೆ ಆದೇಶಿಸಿದೆ. ಶಿಕ್ಷಣವನ್ನು ಸೇವೆ ಎಂದು ಸ್ವೀಕರಿಸಿದ ಕ್ರೈಸ್ತ ಶಿಕ್ಷಣ ಸಂಸ್ಥೆಯಲ್ಲಿನ ಈ ಅಕ್ರಮದ ಬಗ್ಗೆ ಕರ್ನಾಟಕ ಕಾವಲು ಪಡೆ ಆಕ್ರೋಶ ವ್ಯಕ್ತಪಡಿಸಿದ್ದು, ಬರ್ನಾರ್ಡ್ ಮೊರಸ್ ಆದೇಶದ ವಿರುದ್ದ ಶಿಕ್ಷಣ ಇಲಾಖೆ ತ್ವರಿತ ಕ್ರಮ ಜರುಗಿಸಿ ಪೋಷಕರಿಗೆ ಹೊರೆ ತಪ್ಪಿಸುವಂತೆ ಒತ್ತಾಯಿಸಿದೆ.
ಇದನ್ನೂ ಓದಿ : KCET ಪರೀಕ್ಷೆ ಹಾಲ್ ಟಿಕೆಟ್ ಬಿಡುಗಡೆ – ಡೌನ್‌ಲೋಡ್ ಮಾಡಿಕೊಳ್ಳುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ!
