ಡಿಸಿಎಂ ಡಿಕೆ ಶಿವಕುಮಾರ್ ಭೇಟಿಯಾದ ಕಿರಣ್ ಮಜುಂದಾರ್ ಶಾ – ರಸ್ತೆ ಗುಂಡಿಗಳ ಬಗ್ಗೆ ಚರ್ಚೆ!

ಬೆಂಗಳೂರು : ಬೆಂಗಳೂರಿನ ರಸ್ತೆ ಗುಂಡಿ ಮತ್ತು ಕಸ ವಿಲೇವಾರಿ ಕುರಿತು ಟ್ವೀಟ್ ಮೂಲಕ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದ ಬಯೋಕಾನ್ ಸಂಸ್ಥಾಪಕಿ ಕಿರಣ್ ಮಜುಂದಾರ್ ಶಾ, ಇದೀಗ ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಿದ್ದಾರೆ.

ಕಿರಣ್ ಮಜುಂದಾರ್ ಸೇರಿದಂತೆ ಹಲವು ಉದ್ಯಮಿಗಳು‌ ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದಾರೆ. ಕಳೆದ ಕೆಲವು ದಿನಗಳಿಂದ ರಾಜ್ಯ ಸರ್ಕಾರದ ವಿರುದ್ಧ ಕಿರಣ್ ಮಜುಂದಾರ್ ಶಾ ವಾಗ್ದಾಳಿ ನಡೆಸಿದ್ದರು. ಇದಕ್ಕೆ ಖಾರವಾಗಿಯೇ ಪ್ರತಿಕ್ರಿಯಿಸಿದ್ದ ಡಿಸಿಎಂ ಡಿಕೆ ಶಿವಕುಮಾರ್, ಟ್ವೀಟ್‌ಗಳ ಹಿಂದೆ ಬೇರೆ ಅಜೆಂಡಾ ಇದೆ ಎಂದು ಆರೋಪಿಸಿದ್ದರು. ಈ ಹೇಳಿಕೆಗೂ ಕಿರಣ್ ಮಜುಂದಾರ್ ಶಾ ಪ್ರತಿಕ್ರಿಯಿಸಿದ್ದರು. ಈ ಎಲ್ಲಾ ಬೆಳವಣಿಗೆಗಳ ನಡುವೆ ಡಿಸಿಎಂ ಅನ್ನು ಭೇಟಿಯಾಗಿದ್ದು, ಈ ವೇಳೆ ರಸ್ತೆ ಗುಂಡಿಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.

ಕಿರಣ್ ಮಜುಂದಾರ್ ಶಾ ಟ್ವೀಟ್ : ಬೆಂಗಳೂರಲ್ಲಿ ರಸ್ತೆ ಸರಿಯಿಲ್ಲ. ಇಷ್ಟೊಂದು ಕಸ ಏಕಿದೆ? ಚೀನಾದಲ್ಲಿ ಹೀಗಿಲ್ಲ ಎಂದು ಬೆಂಗಳೂರಿಗೆ ಬಂದಿದ್ದ ಉದ್ಯಮಿಯೊಬ್ಬರು ನನಗೆ ಕೇಳಿದರು ಎಂದು ಸರ್ಕಾರವನ್ನು ಪ್ರಶ್ನಿಸಿ ಕಿರಣ್‌ ಟ್ವೀಟ್‌ ಮಾಡಿದ್ದರು. ಈ ಟ್ವೀಟ್ ರಾಜಕೀಯ ಸ್ವರೂಪ ಪಡೆದುಕೊಂಡಿದ್ದು, ವಿಪಕ್ಷಗಳು ಇದನ್ನೇ ಅಸ್ತ್ರವನ್ನಾಗಿ ಮಾಡಿಕೊಂಡು ರಾಜ್ಯ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದವರು.
ಡಿಸಿಎಂ ಡಿಕೆ ಶಿವಕುಮಾರ್ ತಿರುಗೇಟು : ಬೆಂಗಳೂರು ಯಶ ಕಂಡಿರುವುದು ಸಾಮೂಹಿಕ ಯತ್ನದಿಂದಲೇ ಹೊರತು ನಿರಂತರ ಟೀಕೆಯಿಂದಲ್ಲ. ಬೆಂಗಳೂರಲ್ಲಿ ಸವಾಲಿವೆ. ಎದುರಿಸಿ ಕೆಲಸ ಮಾಡುತ್ತ 1100 ಕೋಟಿ ರೂ. ಖರ್ಚಲ್ಲಿ 10 ಸಾವಿರ ಗುಂಡಿ ಗುರುತಿಸಿ 5 ಸಾವಿರ ಗುಂಡಿ ಮುಚ್ಚಿಸಿದ್ದೇವೆ. ಬೆಂಗಳೂರನ್ನು ಒಡೆವ ಬದಲು ನಾವೆಲ್ಲ ಒಟ್ಟಾಗಿ ಕಟ್ಟೋಣ ಎಂದು ಹೇಳುವ ಮೂಲಕ ಡಿಸಿಎಂ ಡಿಕೆ ಶಿವಕುಮಾರ್ ತಿರುಗೇಟು ನೀಡಿದ್ದರು.

ಇದನ್ನೂ ಓದಿ : ದೀಪಾವಳಿ ಮೊದಲ ದಿನವೇ ಪಟಾಕಿ ಅವಘಡ – ಬಾಲಕ ಸೇರಿ ಇಬ್ಬರ ಕಣ್ಣಿಗೆ ಗಾಯ!

Btv Kannada
Author: Btv Kannada

Read More