ದೀಪಾವಳಿ ಮೊದಲ ದಿನವೇ ಪಟಾಕಿ ಅವಘಡ – ಬಾಲಕ ಸೇರಿ ಇಬ್ಬರ ಕಣ್ಣಿಗೆ ಗಾಯ!

ಬೆಂಗಳೂರು : ರಾಜ್ಯಾದ್ಯಂತ ದೀಪಾವಳಿ ಹಬ್ಬದ ಸಂಭ್ರಮ ಜೋರಾಗಿದೆ. ಆದರೆ ಇದೇ ಬೆಳಕಿನ ಹಬ್ಬ ಅದೆಷ್ಟೋ ಜನರ ಬಾಳನ್ನು ಕತ್ತಲಾಗಿಸುತ್ತದೆ. ಹಬ್ಬದ ಮೊದಲ ದಿನವೇ ಪಟಾಕಿ ಹೊಡೆಯುವ ಭರದಲ್ಲಿ ಇಬ್ಬರ ಕಣ್ಣಿಗೆ ಗಾಯವಾಗಿದೆ.

ನಿನ್ನೆ ರಾತ್ರಿ ನಗರದಲ್ಲಿ ನಡೆದ ದುರ್ಘಟನೆಯಲ್ಲಿ 47 ವರ್ಷದ ಮಹಿಳೆಗೆ ಹಾಗೂ 14 ವರ್ಷದ ಬಾಲಕನಿಗೆ ಗಾಯವಾಗಿದೆ. ಮಹಿಳೆ ದಾರಿಯಲ್ಲಿ ಹೋಗುವಾಗ ಅಟಾಂಬ್ ಬಾಂಬ್ ಸಿಡಿದಿದ್ದು, ಬಾಲಕ ಪಟಾಕಿ ಸಿಡಿಸಲು ಹೋದಾಗ ಗಾಯವಾಗಿದೆ. ಇದುವರೆಗೂ ಒಟ್ಟು ನಾಲ್ಕು ಜನರ ಕಣ್ಣಿಗೆ ಗಾಯಗಳಾಗಿದ್ದು, ಗಾಯಾಳುಗಳು ನಗರದ ಮಿಂಟೋ ಕಣ್ಣಿನ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ಮತ್ತು ನಾಳೆ ಪ್ರಕರಣಗಳು ಇನ್ನೂ ಹೆಚ್ಚಾಗುವ ಸಾಧ್ಯತೆಯಿದ್ದು, ಮಿಂಟೋ ಆಸ್ಪತ್ರೆ ಆಡಳಿತ ಮಂಡಳಿ ಈಗಾಗಲೇ ಸಕಲ ಸಿದ್ದತೆಯಲ್ಲಿದೆ.

ಹಬ್ಬ ಆರಂಭ ಆದ ಎರಡೇ ದಿನದಲ್ಲಿ ಪಟಾಕಿ ದುರಂತದ ಪ್ರಕರಣಗಳ ಸಂಖ್ಯೆ 11 ಕ್ಕೆ ಏರಿಕೆಯಾಗಿದೆ. 9 ಜನರಿಗೆ ಒಪಿಡಿಯಲ್ಲಿ ಮತ್ತು ಇಬ್ಬರಿಗೆ ಐಪಿಡಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ದುರಂತದಲ್ಲಿ 7 ವಯಸ್ಕರು, 4 ಮಕ್ಕಳು, 6 ವಯಸ್ಕರ ಪುರುಷರು ಹಾಗೂ ಒಬ್ಬ ವಯಸ್ಕರ ಮಹಿಳೆಗೆ ಗಾಯಗಳಾಗಿದೆ. ಇನ್ನು 2 ಬಾಲಕರು ಹಾಗೂ 2 ಬಾಲಕಿಯರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಲ್ಲಿ 4 ಜನರಿಗೆ ಗಂಭೀರ ಗಾಯಗಳಾಗಿದ್ದು, 7 ಜನರಿಗೆ ಸ್ವಲ್ಪ ಮಟ್ಟಿಗೆ ಗಾಯಗಳಾಗಿದೆ. ಎರಡು ದಿನದಲ್ಲಿ ಒಟ್ಟು 13 ಪ್ರಕರಣಗಳು ನಡೆದಿದ್ದು, ಗಾಯಾಳುಗಳು ಮಿಂಟೋ ಕಣ್ಣಿನ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

ಇದನ್ನೂ ಓದಿ : ವಾಲ್ಮೀಕಿ ಸಮಾಜದ ಬಗ್ಗೆ ಅವಹೇಳನಕಾರಿ ಹೇಳಿಕೆ – ಮಾಜಿ ಸಂಸದ ರಮೇಶ ಕತ್ತಿ ವಿರುದ್ಧ ದೂರು!

Btv Kannada
Author: Btv Kannada

Read More