ದೀಪಾವಳಿಗೆ ಮನೆ ಬಾಗಿಲಲ್ಲಿ ಹಚ್ಚಿದ್ದ ದೀಪದಿಂದ ಅಗ್ನಿ ಅವಘಡ – 7 ಜನರಿಗೆ ಗಂಭೀರ ಗಾಯ, ಮನೆ ಸುಟ್ಟು ಕರಕಲು!

ಬಾಗಲಕೋಟೆ : ದೀಪಾವಳಿ ಹಬ್ಬಕ್ಕೆ ಮನೆ ಮುಂದೆ ಹಚ್ಚಿದ ದೀಪದಿಂದ ಬಾಗಲಕೋಟೆಯ ಗದ್ದಗಕೇರಿ ಬಳಿ ಭಾರಿ ಅಗ್ನಿ ಅವಘಡ ಸಂಭವಿಸಿದೆ. ಇಡೀ ಮನೆಯೊಂದು ಸುಟ್ಟು ಕರಕಲಾಗಿದ್ದು, ಒಂದೇ ಕುಟುಂಬದ ಏಳು ಜನರಿಗೆ ಗಾಯ ಗಾಯಗಾಗಿವೆ.

ಗದ್ದನಕೇರಿ ಕ್ರಾಸ್ ಬಳಿಯ ರಾಜೇಂದ್ರ ತಪಶೆಟ್ಟಿ ಕುಟುಂಬಸ್ಥರು ದೀಪಾವಳಿ ಹಿನ್ನೆಲೆಯಲ್ಲಿ ಮನೆ ಬಾಗಿಲಿನ ಎದುರು ದೀಪ ಹಚ್ಚಿದ್ದರು. ಈ ದೀಪದ ಕಿಡಿ ಆಕಸ್ಮಿಕವಾಗಿ ಮನೆ ಎದುರಿಗೆ ಬಿದ್ದಿದ್ದ ಆಯಿಲ್‌ಗೆ ತಗುಲಿದೆ. ಇದರಿಂದ ತಕ್ಷಣವೇ ಬೆಂಕಿ ಹೊತ್ತಿಕೊಂಡಿದ್ದು, ಅದು ಮನೆ ಮುಂದೆ ನಿಲ್ಲಿಸಿದ್ದ ಎರಡು ಬೈಕ್‌ಗಳನ್ನು ಆವರಿಸಿ, ಬಳಿಕ ಇಡೀ ಮನೆಗೆ ವ್ಯಾಪಿಸಿದೆ.

ಬೆಂಕಿಯ ಕೆನ್ನಾಲಿಗೆಗೆ ಇಡೀ ಮನೆ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಇದರ ಜೊತೆಗೆ, ಮನೆಯೊಳಗೆ ಬೆಂಕಿ ವ್ಯಾಪಿಸಿದಾಗ ಅಡುಗೆ ಮನೆಯಲ್ಲಿದ್ದ ಸಿಲಿಂಡರ್ ಸೋರಿಕೆಯಾಗಿ ಬೆಂಕಿಯ ತೀವ್ರತೆ ಮತ್ತಷ್ಟು ಹೆಚ್ಚಾಗಿದೆ. ಈ ದುರ್ಘಟನೆಯಲ್ಲಿ ರಾಜೇಂದ್ರ ತಪಶೆಟ್ಟಿ ಅವರ ಕುಟುಂಬದ ಏಳು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳಾದ ಸ್ನೇಹಾ, ಸೃಷ್ಟಿ, ಯಶ್ವರ್ಯ, ಸಚ್ಚಿನ್, ಕಲ್ಲಪ್ಪ, ದಾಪುದೇವಿ ಮತ್ತು ಡಿಂಪಲ್ ಅನ್ನು ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಅಗ್ನಿ ಅವಘಡದ ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು. ಈ ಸಂಬಂಧ ಕಲಾದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನು ಓದಿ : ಅಜಯ್ ರಾವ್ ನಟನೆಯ ‘ರಾಧೇಯ’ ಚಿತ್ರದ ಟೀಸರ್ ರಿಲೀಸ್!

Btv Kannada
Author: Btv Kannada

Read More