ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್, ಪರಪ್ಪನ ಅಗ್ರಹಾರದಲ್ಲಿ ನರಕಯಾತನೆ ಅನುಭವಿಸುತ್ತಿದ್ದಾರೆ. ಹೊರಗೆ ಐಷಾರಾಮಿ ಜೀವನ ಕಂಡಿದ್ದ ದರ್ಶನ್ ಜೈಲಿನಲ್ಲಿ ವ್ಯವಸ್ಥೆ ಸರಿಯಿಲ್ಲ, ನನಗೆ ದಿಂಬು, ಬೆಡ್ ಶೀಟ್ ಕೊಡ್ತಿಲ್ಲ, ಬಿಸಿಲಿಗೂ ಬಿಡ್ತಿಲ್ಲ ಎಂದು ಜೈಲಧಿಕಾರಿಗಳ ಬಗ್ಗೆ ಒಂದಲ್ಲ ಒಂದು ದೂರುಗಳನ್ನು ಹೇಳುತ್ತಲೇ ಬಂದಿದ್ದಾರೆ. ಇದೀಗ ಸೆಲ್ನಲ್ಲಿ ನಾನಾ ಸಮಸ್ಯೆಯಾಗ್ತಿದೆ ಎಂದು ದೂರು ಕೊಟ್ಟ ದರ್ಶನ್ ಕಳ್ಳಾಟ ಬಟಾ ಬಯಲಾಗಿದೆ.
ಕಾನೂನು ಸೇವೆಗಳ ಪ್ರಾಧಿಕಾರವು ಈಗ ಜೈಲಿಗೆ ಭೇಟಿ ನೀಡಿ ದರ್ಶನ್ ಸ್ಥಿತಿಯನ್ನು ಪರಿಶೀಲನೆ ನಡೆಸಿದ್ದು, 57 ನೇ ಸಿಸಿಹೆಚ್ ಕೋರ್ಟ್ಗೆ ವರದಿ ಸಲ್ಲಿಸಿದೆ. ಕಾನೂನು ಪ್ರಾಧಿಕಾರ ಅಧಿಕಾರಿಗಳು 10 ಪುಟಗಳ 10 ಪುಟಗಳ ವರದಿಯನ್ನು ಸಲ್ಲಿಕೆ ಮಾಡಿದ್ದು, ಒಟ್ಟು 10 ಪ್ರಶ್ನೆಗಳನ್ನು ನ್ಯಾ.ವರದರಾಜು ಕೇಳಿದ್ದರು. ಸುಮಾರು 10 ಪ್ರಶ್ನೆಗಳನ್ನು ಸಿದ್ದಪಡಿಸಿ ದರ್ಶನ್ ರಿಂದ ಮಾಹಿತಿ ಸಂಗ್ರಹಿಸಲಾಗಿದೆ.
ಕಾನೂನು ಸೇವೆಗಳ ಪ್ರಾಧಿಕಾರ ಸಲ್ಲಿಸಿರುವ ವರದಿ ಗಮನಿಸಿದರೆ ದರ್ಶನ್ ಇಷ್ಟು ದಿನ ಸುಳ್ಳು ಆರೋಪಗಳನ್ನು ಮಾಡುತ್ತಿದ್ದರೆ ಎಂಬ ಅನುಮಾನ ಮೂಡುತ್ತಿದೆ ಮಾತ್ರವಲ್ಲದೆ ದರ್ಶನ್, ಬೇರೆ ವಿಚಾರಣಾಧೀನ ಕೈದಿಗಳಿಗೆ ಇಲ್ಲದ ಸವಲತ್ತುಗಳಿಗೆ ಬೇಡಿಕೆ ಇಡುತ್ತಿದ್ದಾರಾ ಎಂಬ ಅನುಮಾನ ಮೂಡಿದೆ. ಜೈಲಿಗೆ ಭೇಟಿ ನೀಡಿದ್ದ ಕಾನೂನು ಸೇವೆ ಪ್ರಾಧಿಕಾರಿ, ನಟ ದರ್ಶನ್ರ ಆರೋಗ್ಯ, ಅವರ ಜೈಲು ಬ್ಯಾರಕ್, ಅವರ ನಿತ್ಯದ ಕೆಲಸಗಳು ಎಲ್ಲವನ್ನೂ ವೀಕ್ಷಿಸಿ, ಸ್ವತಃ ನಟ ದರ್ಶನ್ ಜೊತೆಗೆ ಚರ್ಚೆ ನಡೆಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದೆ.
ಪ್ರಾಧಿಕಾರ ಸಲ್ಲಿಸಿರುವ ವರದಿಯ ಪ್ರಕಾರ ನಟ ದರ್ಶನ್ ಅನ್ನು ಇರಿಸಲಾಗಿರುವ ಸೆಲ್ನಲ್ಲಿ ಒಂದು ಭಾರತೀಯ ಶೈಲಿಯ ಮತ್ತು ಇನ್ನೊಂದು ವಿದೇಶಿ ಶೈಲಿಯ ಟಾಯ್ಲೆಟ್ ವ್ಯವಸ್ಥೆ ಇದೆ. ದರ್ಶನ್ಗೆ ಹಾಸಿಗೆ ದಿಂಬು ನೀಡಲಾಗಿಲ್ಲ ಎಂಬ ವಿಚಾರವನ್ನೂ ವರದಿಯಲ್ಲಿ ಉಲ್ಲೇಖಿಸಲಾಗಿದ್ದು, ವಿಚಾರಣಾಧೀನ ಕೈದಿಗಳಿಗೆ ಹೆಚ್ಚುವರಿ ಹಾಸಿಗೆ, ದಿಂಬು ನೀಡುವ ನಿಯಮವಿಲ್ಲ ಎಂದು ತಿಳಿಸಲಾಗಿದೆ. ದರ್ಶನ್ ಅವರು ಬಿಸಿಲನ್ನೇ ನೋಡಿಲ್ಲ ಎಂಬ ಆರೋಪಕ್ಕೆ ಸಂಬಂಧಿಸಿದಂತೆ, ಪ್ರತಿದಿನ ಒಂದು ಗಂಟೆ ವಾಕಿಂಗ್ ಮತ್ತು ಆಟ ಆಡಲು ಅವಕಾಶ ನೀಡಲಾಗಿದೆ. ಆದರೆ ದರ್ಶನ್ ಹೆಚ್ಚು ಓಡಾಡಿದರೆ ಸೆಲೆಬ್ರಿಟಿ ಆಗಿರುವುದರಿಂದ ಇತರೆ ಬ್ಯಾರಕ್ನ ಕೈದಿಗಳು ಕಿರುಚುವುದು ಮಾಡುತ್ತಾರೆ ಎಂದು ವರದಿಯಲ್ಲಿ ಹೇಳಲಾಗಿದೆ.
ಟಿವಿ ನೀಡಿಲ್ಲ ಎಂದು ಸಹ ನಟ ದರ್ಶನ್ ದೂರಿದ್ದರು. ಅಸಲಿಗೆ ಕೈದಿಗಳಿಗೆ ಟಿವಿ ನೋಡಲು ಅವಕಾಶ ಇದೆ. ಆದರೆ ದರ್ಶನ್ ಹೇಳಿರುವಂತೆ ಅವರಿಗಾಗಿ ಪ್ರತ್ಯೇಕ ಟಿವಿ ನೀಡುವ ವ್ಯವಸ್ಥೆ ಇಲ್ಲ. ಇನ್ನು ಕುಟುಂಬಕ್ಕೆ ಜೈಲಿನಿಂದ ಕರೆ ಮಾಡಿದಾಗ ಲೌಡ್ಸ್ಪೀಕರ್ನಲ್ಲಿ ಮಾತನಾಡುವಂತೆ ಹೇಳುತ್ತಾರೆ ಎಂಬುದರ ಬಗ್ಗೆಯೂ ವರದಿಯಲ್ಲಿ ಉಲ್ಲೇಖಿಸಲಾಗಿದ್ದು, ಅಸಲಿಗೆ ಜೈಲಿನ ನಿಯಮದ ಪ್ರಕಾರ ಜೈಲಿನಿಂದ ಕೈದಿಗಳು ಕರೆ ಮಾಡಿದಾಗ ಅವರ ಕರೆಗಳನ್ನು ಅಧಿಕಾರಿಗಳು ಆಲಿಸಬಹುದಾಗಿದೆ. ಹಾಗಾಗಿಯೇ ಲೌಡ್ಸ್ಪೀಕರ್ನಲ್ಲಿ ಮಾತನಾಡುವಂತೆ ದರ್ಶನ್ಗೆ ಅಧಿಕಾರಿಗಳು ಸೂಚಿಸಿದ್ದಾರೆ.
ಬಿಸಿಲಿಗೆ ಹೋಗದೆ ಕಾಲಿಗೆ ಫಂಗಸ್ ಬಂದಿದೆ ಎಂಬ ಆರೋಪವೂ ಸುಳ್ಳಾಗಿದ್ದು, ಚರ್ಮ ರೋಗ ತಜ್ಞೆ ಜ್ಯೋತಿ ಅವರು ದರ್ಶನ್ ಅವರನ್ನು ಪರಿಶೀಲನೆ ಮಾಡಿದ್ದು, ದರ್ಶನ್ ಅವರ ಕಾಲಿಗೆ ಫಂಗಸ್ ಬಂದಿಲ್ಲ ಬದಲಿಗೆ ಅವರ ಹಿಮ್ಮಡಿ ತುಸು ಒಡೆದಿದೆ. ಅದಕ್ಕೆ ಔಷಧ ಸೂಚಿಸಲಾಗಿದೆ. ಸೊಳ್ಳೆ ಬತ್ತಿ, ಕನ್ನಡಿ, ಬಾಚಣಿಕೆ ನೀಡಿಲ್ಲ ಎಂದು ಸಹ ದರ್ಶನ್ ಆರೋಪಿಸಿದ್ದರು. ಅಸಲಿಗೆ ಅಪರಾಧಿಗಳಿಗೆ ಮಾತ್ರವೇ ಈ ವ್ಯವಸ್ಥೆ ಕಲ್ಪಿಸಲಾಗುತ್ತದೆ. ವಿಚಾರಣಾಧೀನ ಕೈದಿಗಳಿಗೆ ಇವುಗಳನ್ನು ಕೊಡಬೇಕು ಎಂಬ ನಿಯಮ ಇಲ್ಲ.
ಇದನ್ನೂ ಓದಿ : ರಾಬರಿ ಮಾಡೋಕೆ ಬಂದವ್ರೇ ಗಾಬರಿಯಾಗೋದ್ರು – ಎಂಗೇಜ್ಮೆಂಟ್ ರಿಂಗಿನ ಸುತ್ತ ಬಾಸುಂಡೆಯ ರಂಗು!







