ರಾಯಚೂರು : ರಾಷ್ಟ್ರೀಯ ಸ್ವಯಂಸೇವಕ ಸಂಘ ಆಯೋಜಿಸಿದ್ದ ಪಥಸಂಚಲನದಲ್ಲಿ ಭಾಗವಹಿಸಿದ್ದ ಆರೋಪದ ಮೇಲೆ, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಪಿಡಿಓ ಮತ್ತು ಲಿಂಗಸೂಗೂರು ಶಾಸಕರ ಆಪ್ತ ಸಹಾಯಕ ಪ್ರವೀಣ್ ಕುಮಾರ್ ಅವರನ್ನು ಅಮಾನತುಗೊಳಿಸಲಾಗಿದೆ.

ಲಿಂಗಸೂಗೂರು ಶಾಸಕ ಮಾನಪ್ಪ ಡಿ. ವಜ್ಜಲ್ ಅವರ ಆಪ್ತ ಸಹಾಯಕರೂ ಆಗಿದ್ದ ಪ್ರವೀಣ್ ಕುಮಾರ್ ಅವರು ಇತ್ತೀಚೆಗೆ ನಡೆದ (RSS) ಪಥಸಂಚಲನದಲ್ಲಿ ಭಾಗಿಯಾಗಿದ್ದರು.ಸಂಘದ ಸಮವಸ್ತ್ರ ಧರಿಸಿ, ಕೈಯಲ್ಲಿ ದೊಣ್ಣೆ ಹಿಡಿದು ಅವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.ಸರ್ಕಾರಿ ಅಧಿಕಾರಿಯೊಬ್ಬರು ಸಂಘಟನೆಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.

ಪ್ರವೀಣ್ ಕುಮಾರ್ ಅವರ ಈ ನಡೆ ಸಮಾಜದಲ್ಲಿ ಅಶಾಂತಿಯನ್ನು ಸೃಷ್ಟಿಸಲು ಯತ್ನಿಸಿದೆ ಮತ್ತು ಸರ್ಕಾರದ ಸೇವಾ ನಿಯಮಗಳನ್ನು ಉಲ್ಲಂಘಿಸಿದೆ ಎಂಬ ಗಂಭೀರ ಆರೋಪ ಕೇಳಿಬಂದಿತ್ತು.

ಈ ಹಿನ್ನೆಲೆಯಲ್ಲಿ, ಪಂಚಾಯತ್ ರಾಜ್ ಆಯುಕ್ತರು ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ನೇಮಕಾತಿ ಮತ್ತು ಶಿಸ್ತು ಪ್ರಾಧಿಕಾರದ ಡಾ. ಅರುಂಧತಿ ಚಂದ್ರಶೇಖರ್ ಅವರು ಪ್ರವೀಣ್ ಕುಮಾರ್ ಅವರನ್ನು ತಕ್ಷಣವೇ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.ಸರ್ಕಾರಿ ಸೇವೆಯಲ್ಲಿರುವವರು ಯಾವುದೇ ರಾಜಕೀಯ ಅಥವಾ ಸಂಘಟನಾ ಚಟುವಟಿಕೆಗಳಲ್ಲಿ ಭಾಗವಹಿಸುವುದನ್ನು ಸೇವಾ ನಿಯಮಗಳು ನಿರ್ಬಂಧಿಸುತ್ತವೆ. ಈ ನಿಯಮದ ಉಲ್ಲಂಘನೆಯೇ ಅಮಾನತಿಗೆ ಕಾರಣ ಎನ್ನಲಾಗಿದೆ.
ಇದನ್ನು ಓದಿ : ಸ್ಲಂ ಬೋರ್ಡ್ನಲ್ಲಿ 40 ಪರ್ಸೆಂಟ್ ವಸೂಲಿ – ಬಾಲರಾಜ್ ವಿರುದ್ಧ ಭುಗಿಲೆದ್ದ ಕಂಟ್ರಾಕ್ಟರ್ಸ್!







