ವೈದ್ಯರ ಕಿಡ್ನಾಪ್ ಪ್ರಕರಣ – ತಾಲೂಕು ಪಂಚಾಯಿತಿ ಅಧ್ಯಕ್ಷ ಸೇರಿ ಇಬ್ಬರು ಅರೆಸ್ಟ್!

ಬೆಂಗಳೂರು : ಬೆಂಗಳೂರಿನಲ್ಲಿ ನಡೆದ ವೈದ್ಯರೊಬ್ಬರ ಕಿಡ್ನಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ತಾಲೂಕು ಪಂಚಾಯಿತಿ ಅಧ್ಯಕ್ಷ ಸೇರಿದಂತೆ ಇಬ್ಬರು ಆರೋಪಿಗಳನ್ನು ಚಂದ್ರಾಲೇಔಟ್ ಪೊಲೀಸರು ಬಂಧಿಸಿದ್ದಾರೆ. ಬಾಗಲಕೋಟೆ ಜಿಲ್ಲೆ ಹುನನಾಪುರ ಮೂಲದವರಾದ ಅಪ್ಪಾಸಾಹೇಬ್ ತಾಲೂಕು ಪಂಚಾಯಿತಿ ಅಧ್ಯಕ್ಷ ಜನವಾಡ ಮತ್ತು ಆತನ ಸಂಬಂಧಿ ಮಂಜು ರೂಗಿ ಬಂಧಿತ ಆರೋಪಿಗಳು.

ಕಳೆದ ಜುಲೈ 17 ರಂದು ಆರೋಪಿಗಳು ವೈದ್ಯರಾದ ಬಸವರಾಜ್ ಗುರುಲಿಂಗಪ್ಪ ಎಂಬುವವರನ್ನು ಕಿಡ್ನಾಪ್ ಮಾಡಿದ್ದರು. ಬೆಂಗಳೂರಿನ ವಿಜಯನಗರದ ಅತ್ತಿಗುಪ್ಪೆಯಿಂದ ವೈದ್ಯರನ್ನು ಕಾರಿನಲ್ಲಿ ಅಪಹರಿಸಿದ ಆರೋಪಿಗಳು, ಅವರನ್ನು ಬಾಗಲಕೋಟೆಗೆ ಕರೆದೊಯ್ದಿದ್ದರು. ಕಿಡ್ನಾಪ್ ಮಾಡಿದ ನಂತರ, ಅಪ್ಪಾಸಾಹೇಬ್ ಮತ್ತು ಆತನ ಸಹಚರರು ವೈದ್ಯರ ಬಿಡುಗಡೆಗಾಗಿ ಬರೋಬ್ಬರಿ 75 ಲಕ್ಷ ರೂಪಾಯಿ ಹಣಕ್ಕೆ ಬೇಡಿಕೆಯಿಟ್ಟಿದ್ದರು. ಮರುದಿನವೇ ವೈದ್ಯರ ಕುಟುಂಬಸ್ಥರಿಗೆ ಕರೆ ಮಾಡಿದ ಆರೋಪಿಗಳು, ಹಣವನ್ನು ಬ್ಯಾಂಕ್ ಅಕೌಂಟ್‌ಗೆ ಜಮೆ ಮಾಡುವಂತೆ ಬೆದರಿಕೆ ಹಾಕಿದ್ದರು.

ಈ ಘಟನೆ ಸಂಬಂಧ ವೈದ್ಯ ಬಸವರಾಜ್ ಗುರುಲಿಂಗಪ್ಪ ಅವರ ಸೋದರ ಪುತ್ರ ಮಹಾಂತೇಶ್ ಯಂಡಗೇರಿ ಅವರು ಚಂದ್ರಾಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು ತಕ್ಷಣ FIR ದಾಖಲಿಸಿ, ಅಪಹರಣಕ್ಕೊಳಗಾಗಿದ್ದ ವೈದ್ಯರನ್ನು ಯಶಸ್ವಿಯಾಗಿ ರಕ್ಷಿಸಿದ್ದರು.

ಘಟನೆ ನಡೆದ ನಂತರ ಕಳೆದ ಮೂರು ತಿಂಗಳಿನಿಂದ ತಲೆಮರೆಸಿಕೊಂಡಿದ್ದ ಮುಖ್ಯ ಆರೋಪಿಗಳಾದ ಅಪ್ಪಾಸಾಹೇಬ್ ಜನವಾಡ ಮತ್ತು ಮಂಜು ರೂಗಿ ಅವರನ್ನು ಚಂದ್ರಾಲೇಔಟ್ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಪೊಲೀಸರು ಬಂಧಿತ ಆರೋಪಿಗಳನ್ನು ಹೆಚ್ಚಿನ ವಿಚಾರಣೆ ಒಳಪಡಿಸಿದ್ದು, ಪ್ರಕರಣದ ಕುರಿತು ತನಿಖೆ ಮುಂದುವರೆದಿದೆ.

 

ಇದನ್ನು ಓದಿ : ಬೆಂಗಳೂರಲ್ಲಿ ಕತ್ತು ಕೊಯ್ದು ವಿದ್ಯಾರ್ಥಿನಿಯ ಬರ್ಬರ ಹತ್ಯೆ!

 

 

Btv Kannada
Author: Btv Kannada

Read More