ಹುಬ್ಬಳ್ಳಿಯಲ್ಲಿ ಭೀಕರ ರಸ್ತೆ ಅಪಘಾತ – ಮೂವರು ಮಹಿಳೆಯರು ಸ್ಥಳದಲ್ಲೇ ಸಾವು.. ಇಬ್ಬರಿಗೆ ಗಂಭೀರ ಗಾಯ!

ಹುಬ್ಬಳ್ಳಿ : ಚಾಲಕನ ನಿಯಂತ್ರಣ ತಪ್ಪಿ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಮಹಿಳೆಯರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಹುಬ್ಬಳ್ಳಿ ಹೊರವಲಯದ ನೂಲ್ವಿ ಕ್ರಾಸ್‌ನಲ್ಲಿ ನಡೆದಿದೆ. ಸುಜಾತಾ ಹಿರೇಮಠ (60), ಗಾಯತ್ರಿ ಮಾಂತನಮಠ (67), ಶಕುಂತಲಾ ಹಿರೇಮಠ (72) ಮೃತ ದುರ್ದೈವಿಗಳು. ಇನ್ನು ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿರುವ ಸಂಪತ್​ ಕುಮಾರಿ (63) ಹಾಗೂ ಕಾರು ಚಾಲಕ ವಿರೇಶ್​ ಹಿರೇಮಠ (65) ಅವರನ್ನು ಕಿಮ್ಸ್​ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. 

ಈ ಐವರು ಕಾರ್ಯಕ್ರಮವೊಂದಕ್ಕೆ KA 25 ಎಮ್​ಡಿ 1151 ನಂಬರ್​ನ ಕ್ವಿಡ್ ಕಾರಿನಲ್ಲಿ ಹಾವೇರಿಗೆ ತೆರಳಿದ್ದರು. ಕಾರ್ಯಕ್ರಮ ಮುಗಿಸಿಕೊಂಡು ಹಾವೇರಿಯಿಂದ ಹುಬ್ಬಳ್ಳಿಯತ್ತ NH​4 ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುತ್ತಿದ್ದರು. ಹುಬ್ಬಳ್ಳಿಯಿಂದ ಕೇವಲ 12 ಕಿಮೀ ದೂರದಲ್ಲಿರುವ ನೂಲ್ವಿ ಕ್ರಾಸ್​ನಲ್ಲಿ ಕಾರು, ಚಾಲಕನ ನಿಯಂತ್ರಣ ತಪ್ಪಿ ವೇಗವಾಗಿ ಬಂದು ರಾಷ್ಟ್ರೀಯ ಹೆದ್ದಾರಿಯಲ್ಲಿನ ಡಿವೈಡರ್​​ಗೆ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಅವಘಡದಲ್ಲಿ ಕಾರಿನಲ್ಲಿದ್ದ ಮೂವರು ವೃದ್ಧ ಮಹಿಳೆಯರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮೃತರು ಹುಬ್ಬಳ್ಳಿಯ ಲಿಂಗರಾಜ ನಗರದ ನಿವಾಸಿಗಳಾಗಿದ್ದು, ಅಪಘಾತದಲ್ಲಿ ಗಾಯಗೊಂಡ ಕಾರು ಚಾಲಕ ಹಾಗೂ ಇನ್ನೋರ್ವ ಮಹಿಳೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಇದನ್ನೂ ಓದಿ : ‘ಫೈರ್ ಫ್ಲೈ’ ಚಿತ್ರದ ಮತ್ತೊಂದು ಸಾಂಗ್​ ರಿಲೀಸ್​ – ಏ.24ಕ್ಕೆ ನಿವೇದಿತಾ ಶಿವರಾಜ್‌ಕುಮಾರ್ ನಿರ್ಮಾಣದ ಸಿನಿಮಾ ತೆರೆಗೆ!

Btv Kannada
Author: Btv Kannada

Read More