ಮೈಸೂರು : ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ ಮಾರಿಷಸ್ನಲ್ಲಿ MBBS ಕೋರ್ಸ್ ಆರಂಭಿಸುತ್ತಿದ್ದು, ಅಂತಾರಾಷ್ಟ್ರೀಯ ವೈದ್ಯಕೀಯ ಶಿಕ್ಷಣದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದೆ.
ಈ ಬಗ್ಗೆ ಸುತ್ತೂರು ಶಾಖಾ ಮಠದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಹ ಕುಲಪತಿ ಬಿ.ಸುರೇಶ್, ಮಾರಿಷಸ್ನಲ್ಲಿ MBBS ಕೋರ್ಸ್ ಆರಂಭಿಸಲು ಅಲ್ಲಿನ ಸರ್ಕಾರದ ಉನ್ನತ ಶಿಕ್ಷಣ ಆಯೋಗದಿಂದ ಅನುಮೋದನೆ ಸಿಕ್ಕಿದೆ. ಜೆಎಸ್‌ಎಸ್ ಸ್ಕೂಲ್ ಆಫ್ ಮೆಡಿಸಿನ್ ಸ್ಥಾಪನೆಗೆ ಅನುಮೋದನೆ ದೊರೆತಿದ್ದು, ಪ್ರಸಕ್ತ ವರ್ಷದಲ್ಲೇ ವಿದ್ಯಾರ್ಥಿಗಳ ಪ್ರವೇಶ ಪ್ರಾರಂಭಿಸಲಾಗುತ್ತಿದೆ. ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಯ ದಿವ್ಯ ಸಂಕಲ್ಪ ಹಾಗೂ ದೂರದೃಷ್ಟಿಯ ಮಾರ್ಗ ದರ್ಶನದಿಂದ ಇದು ಸಾಧ್ಯವಾಗಿದೆ. ಅಧಿಕೃತ ಅಂಗೀಕಾರದೊಂದಿಗೆ, ಜೆಎಸ್‌ಎಸ್ ಮಹಾವಿದ್ಯಾಪೀಠ ಅಂತರಾಷ್ಟ್ರೀಯ ವೈದ್ಯಕೀಯ ಶಿಕ್ಷಣದಲ್ಲಿ ಮೈಲಿಗಲ್ಲು ಸ್ಥಾಪಿಸಿದಂತಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

100 ಸೀಟುಗಳ ಪ್ರವೇಶಕ್ಕೆ ಅಲ್ಲಿನ ಸರ್ಕಾರದಿಂದ ಅನುಮತಿ ದೊರೆತಿದೆ. ಇದೇ ನವೆಂಬರ್ನಲ್ಲಿ ಆರಂಭಿಸಲಾಗುವುದು. ನೀಟ್ ಅರ್ಹತೆ ಇರುವವರು ಪ್ರವೇಶ ಪಡೆಯಬಹುದು. ಬೇರೆ ದೇಶದ ವಿದ್ಯಾರ್ಥಿಗಳು ಅಲ್ಲಿನ ಅರ್ಹತಾ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು. ಎನ್‌ಎಂಸಿ (ನ್ಯಾಷನಲ್ ಮೆಡಿಕಲ್ ಕೌನ್ಸಿಲ್) ಮಾರ್ಗಸೂಚಿಯಂತೆ ಕೋರ್ಸ್ ನಡೆಸಲಾಗುವುದು. ಭಾರತೀಯ ಪಠ್ಯಕ್ರಮದಲ್ಲೇ ಬೋಧಿಸಲಾಗುವುದು. ಬೋಧಕರಲ್ಲಿ ಬಹುತೇಕರು ನಮ್ಮ ದೇಶದವರೇ ಇರುತ್ತಾರೆ. ಅಲ್ಲದೆ ಕ್ಲಿನಿಕಲ್ ತರಬೇತಿಯನ್ನೂ ಕೊಡಲಾಗುವುದು. ಇದಕ್ಕೆ ಬೇಕಾದ ಸೌಕರ್ಯ, ಅತ್ಯಾಧುನಿಕ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಜತೆಗೆ, ಎಫ್ಎಂಜಿ (ಫಾರಿನ್ ಮೆಡಿಕಲ್ ಗ್ರಾಜುಯೇಟ್) ಪರೀಕ್ಷೆಗೆ ಬೇಕಾಗುವ ತರಬೇತಿಯನ್ನೂ ನೀಡಲಾಗುವುದು ಎಂದರು.
ಅಲ್ಲಿನ ಆರೋಗ್ಯ ಇಲಾಖೆ ಎಸ್ಎಸ್ ರ್ಆನ್ ಆಸತ್ರೆ, ಐದು ಪ್ರಾದೇಶಿಕ ಆಸ್ಪತ್ರೆಗಳು ಮತ್ತು ಹಲವು ಪ್ರಾಥಮಿಕ ಆರೋಗ್ಯ ಕೇಂದ್ರಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, 600 ಹಾಸಿಗೆಗಳ ಸೌಲಭ್ಯವನ್ನು ನಮ್ಮ ಕಾಲೇಜಿನ ವಿದ್ಯಾರ್ಥಿಗಳ ಕ್ಲಿನಿಕಲ್ ತರಬೇತಿಗೆ ಒದಗಿಸಿದೆ ಎಂದು ಸಹ ಕುಲಪತಿ ಬಿ.ಸುರೇಶ್ ತಿಳಿಸಿದರು.
ಸುದ್ದಿಗೋಷ್ಠಿಯಯಲ್ಲಿ ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯದರ್ಶಿ ಎಸ್.ಪಿ.ಮಂಜುನಾಥ್, ಕಾರ್ಯ ನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ .ಬೆಟಸೂರಮಠ, ನಿರ್ದೇಶಕ ಶಂಕರಪ್ಪ, ಜೆಎಸ್‌ಎಸ್ಎಎಚ್ ಇಆರ್ ಉಪಕುಲಪತಿ ಡಾ.ಎಚ್.ಬಸವನಗೌಡಪ್ಪ, ಕುಲಸಚಿವ ಡಾ.ಬಿ.ಮಂಜುನಾಥ್ ಭಾಗಿಯಾಗಿದ್ದರು.
ಇದನ್ನೂ ಓದಿ : ಕಾರ್ಕಳದ ಮಾಜಿ MLA ಪುತ್ರ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ!







