ಚಿಕ್ಕೋಡಿ : ಮಗಳು ಲವ್ವರ್ ಜೊತೆ ಓಡಿ ಹೋಗಿದ್ದರಿಂದ ಮನನೊಂದ ತಂದೆ ಇಡೀ ಊರಿಗೆ ತಿಥಿ ಊಟ ಹಾಕಿಸಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ನಾಗರಾಳ ಗ್ರಾಮದಲ್ಲಿ ನಡೆದಿದೆ. ಸುಷ್ಮಿತಾ ಶಿವಗೌಡ ಪಾಟೀಲ ಪ್ರೀತಿಸಿದ ಹುಡುಗನೊಂದಿಗೆ ಪರಾರಿಯಾಗಿರುವ ಯುವತಿ.
ಸುಷ್ಮಿತಾ ಶಿವಗೌಡ ನಾಗರಾಳ ಗ್ರಾಮದ ತಹಶೀಲ್ದಾರ್ ಕಚೇರಿಯಲ್ಲಿ ಗ್ರಾಮ ಸೇವಕನಾಗಿ ಕಾರ್ಯ ನಿರ್ವಹಿಸುತ್ತಿದ್ದ ವಿಠ್ಠಲ ಬಸ್ತವಾಡೆ ಎಂಬ ಯುವಕನನ್ನು ಪ್ರೀತಿಸುತ್ತಿದ್ದಳು. ಇದೀಗ ಮಗಳು ಪ್ರಿಯಕರನ ಜೊತೆ ಓಡಿ ಹೋಗಿದ್ದಕ್ಕೆ ತಂದೆ ಕೆಂಡಾಮಂಡಲಗೊಂಡು, ಮಗಳಿಗೆ ಶ್ರಾದ್ಧ ಮಾಡಿ ಕರುಳ ಬಳ್ಳಿ ಸಂಬಂಧಕ್ಕೆ ಅಂತ್ಯ ಹಾಡಿದ್ದಾರೆ.
ಶಿವಗೌಡ ಪಾಟೀಲ ಅವರಿಗೆ 4 ಜನ ಹೆಣ್ಣುಮಕ್ಕಳು ಇದ್ದು, ಸುಷ್ಮಿತಾ ಕೊನೆಯ ಮಗಳಾಗಿದ್ದಾರೆ. ಮನೆತನದ ಸಂಸ್ಕಾರ ಮುರಿದು ಮಗಳು ಓಡಿ ಹೋಗಿದ್ದರಿಂದ ಮನನೊಂದ ಶಿವಗೌಡ ಸುಷ್ಮಿತಾಗೆ ತಿಥಿ ಮಾಡಿ ಇಡೀ ನಾಗರಾಳ ಗ್ರಾಮಸ್ಥರಿಗೆ ಊಟ ಹಾಕಿಸಿದ್ದಾರೆ. ಈ ಹಿಂದೆ ಶಿವಗೌಡ ರಾಯಬಾಗ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕಂಪ್ಲೆಂಟ್ ಕೊಟ್ಟಿದ್ದರು. ಬಳಿಕ ವಿಠ್ಠಲ ಬಸ್ತವಾಡೆ ಜೊತೆ ಪರಾರಿಯಾಗಿರುವ ವಿಚಾರ ತಿಳಿದು ಬಂಧು-ಬಳಗ ಸೇರಿದಂತೆ ಸಂಬಂಧಿಕರನ್ನು ಕರೆಸಿ ಮಗಳಿಗೆ ತಿಥಿ ಕಾರ್ಯ ಮಾಡಿದ್ದಾರೆ. ಈ ಸಂಬಂಧ ರಾಯಬಾಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿಚಾರಣೆ ಮುಂದುವರಿದಿದೆ.
ಇದನ್ನೂ ಓದಿ : ಇಂಪೀರಿಯಲ್ ಬಿಲ್ಡ್ ಟೆಕ್ ಪ್ರೈವೇಟ್ ಲಿ. ಕಂಪನಿ ಮಹಾ ಯಡವಟ್ಟು – ನಿರ್ಮಾಣ ಹಂತದ ಕಟ್ಟಡದಿಂದ ಬಿದ್ದು ಇಬ್ಬರು ಕಾರ್ಮಿಕರು ಸ್ಥಳದಲ್ಲೇ ಸಾವು!







