ಬೆಂಗಳೂರು : ಅಕ್ರಮ ಬೆಟ್ಟಿಂಗ್ ಹಗರಣದಲ್ಲಿ ಸಿಕ್ಕಿಬಿದ್ದಿರುವ ಕಾಂಗ್ರೆಸ್ ಶಾಸಕ ವೀರೇಂದ್ರ ಪಪ್ಪಿ ಬಿಹಾರ ಚುನಾವಣೆಗಾಗಿ ಹೈಕಮಾಂಡ್ಗೆ 300 ಕೋಟಿ ರೂಪಾಯಿ ಕೊಟ್ಟು ಮಂತ್ರಿಗಿರಿ ಗಿಟ್ಟಿಸಿಕೊಳ್ಳಲು ಪ್ರಯತ್ನಿಸಿದ್ದಾರೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಆರೋಪ ಮಾಡಿದ್ದಾರೆ.
ಈ ಬಗ್ಗೆ ಆರ್. ಅಶೋಕ್ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡು, ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ರಾಹುಲ್ ಗಾಂಧಿ ಅವರ ATM ಸರ್ಕಾರ ಎನ್ನುವುದಕ್ಕೆ ಇದಕ್ಕಿಂತ ಸಾಕ್ಷಿ ಬೇಕಾ? ಎಂದು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಶಾಸಕ ವೀರೇಂದ್ರ ಪಪ್ಪಿ ಅವರ ಕರ್ಮಕಾಂಡ ನೋಡುತ್ತಿದ್ದರೆ ಇನ್ನು ಸಿಎಂ, ಡಿಸಿಎಂ, ಮಂತ್ರಿಗಳು ತಮ್ಮ ಇರುವ ಕುರ್ಚಿ ಉಳಿಸಿಕೊಳ್ಳಲು ಇನ್ಯಾವ ಪರಿ ಲೂಟಿ ಮಾಡಿ ಹೈಕಮಾಂಡ್ಗೆ ಕಪ್ಪ ನೀಡುತ್ತಿರಬೇಡ ನೀವೇ ಊಹಿಸಿಕೊಳ್ಳಿ. ಒಂದು ಕಡೆ ಜನರಿಗೆ ಕ್ಯಾಸಿನೋ, ಜೂಜು, ಬೆಟ್ಟಿಂಗ್ ಆಡಿಸಿ ಬಡವರ ಮನೆಹಾಳು ಮಾಡಿ ಅಡ್ಡದಾರಿಯಲ್ಲಿ ದುಡ್ಡು ಮಾಡುವುದು. ಆ ಪಾಪದ ಹಣದಲ್ಲಿ ಟಿಕೆಟ್ ಪಡೆದು, ಚುನಾವಣೆ ಎದುರಿಸಿ, ಹೈಕಮಾಂಡ್ ಗೆ ಕಪ್ಪ ಕೊಟ್ಟು ಮಂತ್ರಿಗಿರಿ ಗಿಟ್ಟಿಸಿಕೊಳ್ಳುವುದು. ಆಮೇಲೆ ಮಂತ್ರಿಗಿರಿ ಬಳಸಿಕೊಂಡು ಇನ್ನಷ್ಟು ಲೂಟಿ ಮಾಡುವುದು. ಇದು ಕಾಂಗ್ರೆಸ್ ಸರ್ಕಾರ ಕರ್ನಾಟಕದಲ್ಲಿ ಹೆಣೆದಿರುವ ವಿಷ ವರ್ತುಲ ಎಂದು ಹೇಳಿದ್ದಾರೆ.
ತೆಲಂಗಾಣ ಚುನಾವಣೆಗೆ, ಲೋಕಸಭೆ ಚುವಾವಣೆಗೆ ವಾಲ್ಮೀಕಿ ನಿಗಮದ ಹಣ ಸೇರಿದಂತೆ ಸಾವಿರಾರು ಕೋಟಿ ಲಪಟಾಯಿಸಿದ್ದಾಯ್ತು. ಈಗ ಬಿಹಾರ ಚುನಾವಣೆಗೆ ಕನ್ನಡಿಗರ ತೆರಿಗೆ ಹಣ ಇನ್ನೆಷ್ಟು ಲೂಟಿ ಆಗುತ್ತದೆಯೋ ಗೊತ್ತಿಲ್ಲ. ಈ ರೀತಿ ಪಾಪದ ಹಣದಲ್ಲಿ ಚುನಾವಣೆ ನಡೆಸುವ ರಾಹುಲ್ ಗಾಂಧಿ ಅವರಿಗೆ ಚುನಾವಣಾ ಪ್ರಕ್ರಿಯೆ ಬಗ್ಗೆ, ಚುನಾವಣಾ ಆಯೋಗದ ಬಗ್ಗೆ ಮಾತನಾಡುವ ಯಾವ ನೈತಿಕತೆ ಇದೆ? ಎಂದು ಆರ್. ಅಶೋಕ್ ಪ್ರಶ್ನಿಸಿದ್ದಾರೆ.
ನಾಚಿಕೆಯಾಗಬೇಕು ಕಾಂಗ್ರೆಸ್ ಪಕ್ಷಕ್ಕೆ. ಅಂದಹಾಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರು ಬಿಹಾರ ಚುನಾವಣೆಗೆ ಎಷ್ಟು ಕೋಟಿ ಹಣ ಲೂಟಿ ಮಾಡಿ ರಾಹುಲ್ ಗಾಂಧಿ ಅವರಿಗೆ ಚಂದಾ ನೀಡುವ ಭರವಸೆ ಕೊಟ್ಟಿದ್ದಾರೆ? ಎಂದಿದ್ದಾರೆ.
ಇದನ್ನೂ ಓದಿ : “ಮಾಂಕ್ ದಿ ಯಂಗ್” ಸಿನಿಮಾ ಬಜಾರ್ OTTಗೆ ಎಂಟ್ರಿ – ಸ್ಕ್ಯಾನ್ ಮಾಡಿ ಚಿತ್ರ ನೋಡಿ!







