ಬಾಕ್ಸ್ ಆಫೀಸ್‌ನಲ್ಲಿ ‘ಕಾಂತಾರ – ಚಾಪ್ಟರ್ 1’ ಅಬ್ಬರ – ವಿಶ್ವದಾದ್ಯಂತ 500 ಕೋಟಿಗೂ ಅಧಿಕ ಗಳಿಕೆ!

ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ‘ಕಾಂತಾರ: ಚಾಪ್ಟರ್ 1’ ಬಾಕ್ಸ್ ಆಫೀಸ್‌ನಲ್ಲಿ ದಿನೇ ದಿನೇ ದಾಖಲೆಗಳನ್ನು ಮುರಿಯುತ್ತಾ ಸಾಗುತ್ತಿದೆ. ಹೊಂಬಾಳೆ ಫಿಲ್ಮ್ಸ್ ಅಡಿಯಲ್ಲಿ ವಿಜಯ್ ಕಿರಗಂದೂರು ನಿರ್ಮಿಸಿದ ಈ ಬಹುಭಾಷಾ ಚಿತ್ರವು ಅಕ್ಟೋಬರ್ 2ರಂದು ಬಿಡುಗಡೆಯಾಯಿತು. ಅಂದಿನಿಂದ ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ.

ಬಿಡುಗಡೆಯಾದ ಮೊದಲ ವಾರದಲ್ಲೇ ಚಿತ್ರವು ಭರ್ಜರಿ ಕಲೆಕ್ಷನ್ ಮಾಡಿದ್ದು, ಇಲ್ಲಿಯವರೆಗೆ ವಿಶ್ವಾದ್ಯಂತ 509 ಕೋಟಿಗೂ ಹೆಚ್ಚು ಗಳಿಕೆ ಮಾಡುವ ಮೂಲಕ ಭರ್ಜರಿ ಯಶಸ್ಸನ್ನು ಸಾಧಿಸಿದೆ.

‘ಕಾಂತಾರ ಚಾಪ್ಟರ್ 1’ ಅದ್ಭುತ ಕಥಾಹಂದರ, ನಮ್ಮ ನೆಲದ ಸಂಸ್ಕೃತಿಯ ವಾಸ್ತವಿಕ ಚಿತ್ರಣ ಮತ್ತು ತಾಂತ್ರಿಕ ಉತ್ಕೃಷ್ಟತೆಗಾಗಿ ವಿಮರ್ಶಕರು ಮತ್ತು ಪ್ರೇಕ್ಷಕರಿಂದ ಸರಿಸಾಟಿಯಿಲ್ಲದ ಪ್ರಶಂಸೆ ಗಳಿಸಿದೆ. ಈ ಚಿತ್ರವು ದೇಶಾದ್ಯಂತ ಹಾಗೂ ವಿದೇಶಿ ಮಾರುಕಟ್ಟೆಗಳಲ್ಲಿ ತನ್ನ ಅಬ್ಬರವನ್ನು ಮುಂದುವರೆಸಿದ್ದು, ಕನ್ನಡ ಚಿತ್ರರಂಗದ ಜಾಗತಿಕ ವಿಸ್ತಾರವನ್ನು ಇನ್ನಷ್ಟು ದೃಢಪಡಿಸಿದೆ.
2022ರ ಕಾಂತಾರದ ಯಶಸ್ಸಿನ ನಂತರ, ಈ ಪೂರ್ವಕಥೆಯು (Prequel) ಫ್ರಾಂಚೈಸಿಯ ಮೌಲ್ಯವನ್ನು ಮತ್ತಷ್ಟು ಹೆಚ್ಚಿಸಿದೆ. ರಾಜಕುಮಾರ, ಕೆಜಿಎಫ್ ಅಧ್ಯಾಯ 1 ಮತ್ತು 2, ಕಾಂತಾರ ಮತ್ತು ಸಲಾರ್ನಂತಹ ಬೃಹತ್ ಚಿತ್ರಗಳನ್ನು ನೀಡಿದ ಹೊಂಬಾಳೆ ಫಿಲ್ಮ್ಸ್‌, ಇಂದು ಭಾರತೀಯ ಸಿನಿಮಾದಲ್ಲಿ ಅತ್ಯಂತ ಯಶಸ್ವಿ ಮತ್ತು ಗೌರವಾನ್ವಿತ ನಿರ್ಮಾಣ ಸಂಸ್ಥೆಗಳಲ್ಲಿ ಒಂದಾಗಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಈ ಯಶಸ್ಸು ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಗರಿ.

ಇದನ್ನೂ ಓದಿ : ನಂದ ಕಿಶೋರ್-ಮೋಹನ್ ಲಾಲ್ ನಟನೆಯ ‘ವೃಷಭ’ ಸಿನಿಮಾ ರಿಲೀಸ್ ಡೇಟ್ ಫಿಕ್ಸ್!

Btv Kannada
Author: Btv Kannada

Read More