ಮಿಲನ ನಾಗರಾಜ್, ಜಗನ್, ಕಿರಣ್ ರಾಜ್, ಶಿಲ್ಪ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ “ಚತುಷ್ಪಥ” ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಯಿತು. ರೂಪ ಬಾಯಿ ಹಾಗೂ ಕೃಷ್ಣೋಜಿ ರಾವ್ ಅವರು ನಿರ್ಮಿಸಿರುವ ಹಾಗೂ ಕೃಷ್ಣೋಜಿ ರಾವ್ ಅವರೆ ನಿರ್ದೇಶಿಸಿರುವ ಈ ಚಿತ್ರ ವಿಭಿನ್ನ ಕಂಟೆಂಟ್ ವುಳ್ಳ ಟ್ರೇಲರ್ನಲ್ಲೇ ನೋಡುಗರ ಗಮನ ಸೆಳೆದಿದೆ.

“ಚತುಷ್ಪಥ” ಎಂದರೆ ನಾಲ್ಕು ದಾರಿಗಳು. ಹೆದ್ದಾರಿಗಳಲ್ಲಿ ನಾವು ಇದನ್ನು ನೋಡಬಹುದು. ಆದರೆ ನಮ್ಮ ಚಿತ್ರದಲ್ಲಿ ಬಡ ಜನರ ವರ್ಗ, ಮಧ್ಯಮ ವರ್ಗ, ಶ್ರೀಮಂತರ ವರ್ಗ ಹಾಗೂ ಕಾನೂನು ಮತ್ತು ಸುವ್ಯವಸ್ಥೆ ಈ ನಾಲ್ಕು ಅಂಶಗಳನಿಟ್ಟುಕೊಂಡು ನಾಲ್ಕು ಪ್ರಮುಖ ಪಾತ್ರಗಳ ಸುತ್ತ ಕಥೆ ಹೆಣೆಯಲಾಗಿದೆ. ಚಿತ್ರದಲ್ಲಿ ನಾಲ್ಕು ಜನರ ದಾರಿ ಬೇರೆಯೇ ಆಗಿರುತ್ತದೆ. ಆ ದಾರಿಗಳು ಎಲ್ಲಿ ತಲುಪುತ್ತದೆ. ಎಂಬುದನ್ನು ಸಿನಿಮಾದಲ್ಲಿ ನೋಡಬೇಕು. ವಿಭಿನ್ನ ಕಂಟೆಂಟ್ ಹೊಂದಿರುವ ನಮ್ಮ ಚಿತ್ರದಲ್ಲಿ ನೋಡುಗರಿಗೆ ಬೇಕಾದ ಎಲ್ಲಾ ಅಂಶಗಳು ಇದೆ. ಮೊದಲ ಪ್ರತಿ ಸಿದ್ದವಾಗಿದೆ. ಸದ್ಯದಲ್ಲೇ ಚಿತ್ರ ನಿಮ್ಮ ಮುಂದೆ ಬರಲಿದೆ. “ಚತುಷ್ಪಥ” ನನ್ನ ಚೊಚ್ಚಲ ನಿರ್ದೇಶನದ ಚಿತ್ರ. ನಮ್ಮ ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದು ನಿರ್ದೇಶಕ ಕೃಷ್ಣೋಜಿ ರಾವ್ ತಿಳಿಸಿದರು.

ನಿರ್ದೇಶಕರು ನನಗೆ ಕಥೆ ಹೇಳಿದಾಗ ನನ್ನ ಪಾತ್ರದ ಬಗ್ಗೆ ಕೇಳಿ ಬಹಳ ಇಷ್ಟವಾಯಿತು. ಈ ಚಿತ್ರದಲ್ಲಿ ನಾಲ್ಕು ಜನರ ದಾರಿ ನಾಲ್ಕು ಕಡೆ ಹೋಗಿ ಮುಟ್ಟುತ್ತದೆ. ಅದರಲ್ಲಿ ನನ್ನದು ಒಂದು ದಾರಿ. ಈ ನಾಲ್ಕು ದಾರಿ ಎಲ್ಲಿ ಹೋಗಿ ಮುಟ್ಟುತ್ತದೆ ಎನ್ನುವುದೆ “ಚತುಷ್ಪಥ”. ಎಂದು ಪ್ರಮುಖ ಪಾತ್ರದಲ್ಲಿ ನಟಿಸಿರುವ ನಟ ಜಗನ್ ಹೇಳಿದರು.
ಸಂಗೀತ ನಿರ್ದೇಶಕ ವೀರ ಸಮರ್ಥ್ ಅವರು, ಚಿತ್ರದಲ್ಲಿ ಎರಡು ಹಾಡುಗಳು ಹಾಗೂ ಒಂದು ಬಿಟ್ ಇದೆ. ಹಾಡುಗಳು ಚೆನ್ನಾಗಿದೆ. ಸದ್ಯದಲ್ಲೇ ಬಿಡುಗಡೆಯಾಗಲಿದೆ. ವಿಜಯ್ ಪ್ರಕಾಶ್ ಸೇರಿದಂತೆ ಹೆಸರಾಂತ ಗಾಯಕರು ಈ ಚಿತ್ರದ ಹಾಡುಗಳನ್ನು ಹಾಡಿದ್ದಾರೆ ಎಂದರು.

ನಟಿ ಶಿಲ್ಪ, ನಟ ಸುಂದರ್, ನಟಿ ಸವಿತ, ಸಂಭಾಷಣೆ ಬರೆದಿರುವ ರಘು ನಿಡುವಳ್ಳಿ ಹಾಗೂ ಛಾಯಾಗ್ರಾಹಕ ಉದಯ್ ಬಲ್ಲಾಳ್ ಅವರು ಸಹ “ಚತುಷ್ಪಥ” ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡರು.
ಜಗನ್, ಕಿರಣ್ ರಾಜ್, ಮಿಲನ ನಾಗರಾಜ್, ಶಿಲ್ಪ, ಹನುಮಂತೇ ಗೌಡ, ಶ್ರೀಧರ್, ಸುಂದರ್, ಆಕರ್ಶ್, ತರಂಗ ವಿಶ್ವ, ಸವಿತ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
ಇದನ್ನೂ ಓದಿ : ಗುತ್ತಿಗೆದಾರರಿಂದ 3 ಲಕ್ಷ ರೂ. ಲಂಚ – PWD ಎಂಜಿನಿಯರ್ ಮಹೇಶ ರಾಠೋಡ ಅರೆಸ್ಟ್!







