ಅ.12 ರಿಂದ ಬಾಗಲಗುಂಟೆ ಮಾರಮ್ಮ ದೇವಿಯ ಅದ್ಧೂರಿ ಜಾತ್ರಾ ಮಹೋತ್ಸವ!

ಬೆಂಗಳೂರು : ಬಾಗಲಗುಂಟೆ ಶಕ್ತಿದೇವತೆ ಶ್ರೀ ಮಾರಮ್ಮ ದೇವಿಯ ವೈಭವದ ಜಾತ್ರಾ ಮಹೋತ್ಸವ ಅ.12 ಭಾನುವಾರದಿಂದ ಮೂರು ದಿನಗಳ ಕಾಲ ವಿಜೃಂಭಣೆಯಿಂದ ನಡೆಯಲಿದ್ದು, ಪೂರ್ವ ಸಿದ್ಧತೆಗಳು ಭರದಿಂದ ಸಾಗಿವೆ.

ಅ. 12 ರಂದು ರಾತ್ರಿ 11.30ಕ್ಕೆ ಶ್ರೀ ಮಾರಮ್ಮದೇವಿಯ (ಘಟ್ಟಗಡಿಗೆ)ಉತ್ಸವ ಸಿಡೇದಹಳ್ಳಿ ಮತ್ತು ತೋಟದಗುಡ್ಡದಹಳ್ಳಿಗೆ ಹೊರಡಲಿದೆ. ಮಧ್ಯಾಹ್ನ 2 ಗಂಟೆಗೆ ಶ್ರೀ ಮಾರಮ್ಮದೇವರ ಪುಣ್ಯಾಹ, ಸಂಜೆ 7.30ಕ್ಕೆ ಜಾತ್ರೆಯ ಪ್ರಮುಖ ಆಕರ್ಷಣೆ ಕುರ್ಜಿ ಮರ ಎತ್ತುವುದು, ರಾತ್ರಿ 9ಕ್ಕೆ ಬಾಗಲಗುಂಟೆಯ ಪ್ರಮುಖ ರಸ್ತೆಗಳಲ್ಲಿ ಶ್ರೀ ಮಾರಮ್ಮ ದೇವಿಯ ಮೆರವಣಿಗೆ, ರಾತ್ರಿ 11ಕ್ಕೆ ಮಾರಮ್ಮ ದೇವಿಯ ಅಗ್ನಿಕುಂಡ ಹಚ್ಚುವ ಕಾರ್ಯಕ್ರಮ ನಡೆಯಲಿದೆ.

ಅ. 13 ರಂದು ಬೆಳಗ್ಗೆ 8 ಗಂಟೆಗೆ ನವಗ್ರಹಗಳಿಗೆ ಬೆಲ್ಲದ ಆರತಿ ಮತ್ತು ಪೂಜೆ, ಬೆಳಗ್ಗೆ 9ಕ್ಕೆ ಶ್ರೀ ವೇಣುಗೋಪಾಲಸ್ವಾಮಿಗೆ ಬೆಲ್ಲದ ಆರತಿ, 10ಕ್ಕೆ ಶ್ರೀ ಆಂಜನೇಯಸ್ವಾಮಿಗೆ ಬೆಲ್ಲದ ಆರತಿ, 11ಕ್ಕೆ ಶ್ರೀ ರಾಮದೇವರ ಸ್ವಾಮಿಗೆ ಬೆಲ್ಲದ ಆರತಿ, ಮಧ್ಯಾಹ್ನ 1ಕ್ಕೆ ಶ್ರೀ ಮಾರಮ್ಮದೇವಿಗೆ ದೊಡ್ಡಾರತಿ ಮತ್ತು ಬಾಯಿಬೀಗ ಸೇವೆ, 2ಕ್ಕೆ ಅಲುಗು ಸೇವೆ, 3ಕ್ಕೆ ಭಕ್ತಾದಿಗಳು ಅಗ್ನಿಕುಂಡದಲ್ಲಿ ನಡೆಯುವುದು, ಸಂಜೆ 6.30ಕ್ಕೆ ಶ್ರೀ ಪಳೇಕಮ್ಮ ಮತ್ತು ಶ್ರೀ ಮುತ್ತುರಾಯಸ್ವಾಮಿಗೆ ಬೆಲ್ಲದ ಆರತಿ ಸೇವೆ ನಡೆಯಲಿದೆ. ಅ. 14ರಂದು ಬೆಳಗ್ಗೆ 9ಕ್ಕೆ ಗ್ರಾಮದ ಎಲ್ಲಾದೇವರುಗಳಿಗೂ ಮಹಾಮಂಗಳಾರತಿ ನಡೆಯಲಿದೆ.

ಈ ನಡುವೆ, ಮಾರಮ್ಮ ಜಾತ್ರೆಗೆ ಅಪಾರ ಸಂಖ್ಯೆಯ ಜನರು ಹಾಗೂ ವಾಹನಗಳು ಆಗಮಿಸಲಿರುವ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಅಧಿಕಾರಿಗಳು ಎಚ್ಚರ ವಹಿಸಬೇಕು ಎಂದು ಸ್ಥಳೀಯ ಶಾಸಕ ಎಸ್ .ಮುನಿರಾಜು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಮಾರಮ್ಮ ದೇವಸ್ಥಾನದ ಬಳಿ ಜಿಬಿಎ ಅಧಿಕಾರಿಗಳು, ಬಾಗಲಗುಂಟೆ ಪೊಲೀಸ್ ಇನ್ ಸ್ಪೆಕ್ಟರ್ ಹನುಮಂತರಾಜ್ ಎಂ, ಪೀಣ್ಯ ಸಹಾಯಕ ಪೊಲೀಸ್ ಕಮಿಷನರ್ , ಚಿಕ್ಕಬಾಣಾವರ ಸಂಚಾರ ಪೊಲೀಸ್ ಇನ್ಸ್ ಪೆಕ್ಟರ್ ಕೇಶವಮೂರ್ತಿ, ಆರೋಗ್ಯ ಅಧಿಕಾರಿಗಳು, ಪಾಲಿಕೆ ಅಧಿಕಾರಿಗಳ ಜತೆ ಪೂರ್ವಭಾವಿ ಸಭೆ ನಡೆಸಿದ ಶಾಸಕರು, ಸ್ವಚ್ಛತೆ, ಕುಡಿಯುವ ನೀರಿನ ಸಮಸ್ಯೆ, ಭದ್ರತೆ, ಸಂಚಾರ, ಕಾನೂನು ಮತ್ತು ಸುವ್ಯವಸ್ಥೆ, ವಿದ್ಯುತ್ ಸಮಸ್ಯೆ ತಲೆದೋರದಂತೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ಇದನ್ನೂ ಓದಿ : ಬೆಂಗಳೂರಿನಲ್ಲಿ ಹೃದಯವಿದ್ರಾವಕ ಘಟನೆ – ಇಬ್ಬರು ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆ!

Btv Kannada
Author: Btv Kannada

Read More