ಹಾವೇರಿ : ಇನ್ಶುರೆನ್ಸ್ ಹಣ, ಆಸ್ತಿಗಾಗಿ ಸ್ನೇಹಿತನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಹಾವೇರಿ ಜಿಲ್ಲೆಯ ರಟ್ಟಿಹಳ್ಳಿಯ ಚಿಕ್ಕಯಡಚಿ ರಸ್ತೆಯ ಬಣಕಾರ ಬಳಿ ನಡೆದಿದೆ. ಬಸವರಾಜ್ ಪುಟ್ಟನವರ ಕೊಲೆಯಾದ ವ್ಯಕ್ತಿ. ಸ್ನೇಹಿತನನ್ನು ಕೊಲೆಗೈದು ಅಪಘಾತವೆಂದು ಬಿಂಬಿಸಿದ್ದ ಗ್ಯಾಂಗ್ನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಈ ಗ್ಯಾಂಗ್ 3 ತಿಂಗಳ ಹಿಂದೆಯೇ ಅಂಚೆಯಲ್ಲಿ 500 ರೂ ಅಪಘಾತ ವಿಮೆ ಮಾಡಿಸಿತ್ತು. ಅಷ್ಟೇ ಅಲ್ಲದೆ ಸಂಪೂರ್ಣ ಆಸ್ತಿಯನ್ನ ತಮ್ಮ ಹೆಸರಿಗೆ ವಿಲ್ನಲ್ಲಿ ನೋಂದಣಿ ಮಾಡಿಸಿಕೊಂಡಿದ್ದರು. ಒಂಟಿಯಾಗಿದ್ದ ವ್ಯಕ್ತಿಯ ಹಣ & ಆಸ್ತಿ ದೋಚಲು ಸ್ನೇಹಿತರೇ ಮಾಸ್ಟರ್ ಪ್ಲ್ಯಾನ್ ಮಾಡಿದ್ದು, ರಾತ್ರಿ ಹೊತ್ತು ಬಸವರಾಜ್ಗೆ ಎಣ್ಣೆ ಕುಡಿಸಿ ಗ್ಯಾಂಗ್ ಕಾರಿನಿಂದ ಗುದ್ದಿದೆ. ಬಳಿಕ ಅಪಘಾತವಾದ ರೀತಿಯಲ್ಲಿ ಮೃತದೇಹ ಬಿಸಾಕಿ ಅಲ್ಲಿಂದ ಎಸ್ಕೇಪ್ ಆಗಿದ್ದಾರೆ.
ಇನ್ಶುರೆನ್ಸ್ ಹಣಕ್ಕೆ ಮಾಡಿಸಿದ್ದ ನಾಮಿನಿ ಸಹಿ ಮೂಲಕ ಈ ಸತ್ಯ ಬಯಲಾಗಿದ್ದು, ಸದ್ಯ ರಟ್ಟಿಹಳ್ಳಿ ಪೊಲೀಸರು ಕೊಲೆಗೈದ ನಾಲ್ವರು ಆರೋಪಿಗಳ ಹಡೆಮುರಿ ಕಟ್ಟಿದ್ದಾರೆ. ರಾಘು, ಸಿದ್ದನಗೌಡ, ಪ್ರವೀಣ, ಲೋಕೇಶ್ ಬಂಧಿತ ಆರೋಪಿಗಳು. ಈ ಸಂಬಂಧ ರಟ್ಟಿಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







