ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ‘ಕಾಂತಾರ ಚಾಪ್ಟರ್ 1’ ದೇಶಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಈ ಮಧ್ಯೆ ಸಿನಿಮಾಗೆ ಸಂಬಂಧಿಸಿದಂತೆ ಕೆಲವು ಪ್ರೇಕ್ಷಕರು ಚಿತ್ರಮಂದಿರಗಳಲ್ಲಿ ತೋರಿಸುತ್ತಿರುವ ಅನುಚಿತ ವರ್ತನೆ ಕುರಿತು ಚಿತ್ರತಂಡ ಗಂಭೀರ ಎಚ್ಚರಿಕೆ ನೀಡಿದೆ.
ಕಾಂತಾರ ಚಿತ್ರದ ಪ್ರಮುಖ ಪಾತ್ರಧಾರಿಯಾದ ದೈವದ ವೇಷ ಅಥವಾ ದೈವ ಅವಾಹನೆ ರೀತಿಯ ದೃಶ್ಯಗಳನ್ನು ಅನುಕರಿಸುವ ಮೂಲಕ ಕೆಲವರು ಹುಚ್ಚಾಟ ನಡೆಸಿರುವುದು ಚಿತ್ರತಂಡದ ಗಮನಕ್ಕೆ ಬಂದಿದ್ದು, ಇದು ‘ನಂಬಿಕೆಗೆ ಮಾಡುವ ಅಪಚಾರ’ ಎಂದು ನಿರ್ದೇಶಕ ಮತ್ತು ನಟ ರಿಷಬ್ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಿನಿಪ್ರಿಯರೇ, ದೈವಾರಾಧನೆ ತುಳುನಾಡಿನ ನಂಬಿಕೆಯ ಪ್ರತೀಕ. ಅದು ತುಳುವರ ಅಸ್ಮಿತೆ. ದೈವದ ಬಗೆಗಿನ ಅಪಾರ ಗೌರವ ಮತ್ತು ಅಚಲ ಶ್ರದ್ದೆಗೆ ಕಿಂಚಿತ್ತೂ ಚ್ಯುತಿ ಬಾರದಂತೆ ದೈವಗಳ ಮಹಿಮೆಯನ್ನು ಸಾರುವ ಭಕ್ತಿಪೂರ್ವಕ ಕಥೆಯನ್ನು ನಾವು ಕಾಂತಾರ ಸಿನೆಮಾದಲ್ಲಿ ತೋರಿಸಿದ್ದೇವೆ. ತುಳು ಮಣ್ಣಿನ ಮಹತ್ವ ಹಾಗೂ ಪರಂಪರೆಯನ್ನು ಇಡೀ ಜಗತ್ತಿಗೆ ಸಾರುವಲ್ಲಿ ನಮ್ಮದ್ದಾದ ಕೊಡುಗೆಯನ್ನು ಕೊಟ್ಟಿದ್ದೇವೆ. ಆದರೆ ಕೆಲವರು ಸಿನೆಮಾದಲ್ಲಿ ಬರುವ ಪಾತ್ರಗಳನ್ನು ಅನುಕರಿಸಿ ಎಲ್ಲೆಂದರಲ್ಲಿ ಅನುಚಿತ ರೀತಿಯ ವರ್ತನೆಗಳನ್ನು ಮಾಡುವುದು ಚಿತ್ರತಂಡದ ಗಮನಕ್ಕೆ ಬಂದಿದೆ.
ಇದು ನಮ್ಮ ನಂಬಿಕೆಗೆ ಮಾಡುವ ಅಪಚಾರವೂ ಹೌದು, ಅಕ್ಷಮ್ಯ ಅಪರಾಧವೂ ಹೌದು. ಇಂತಹ ವರ್ತನೆಗಳನ್ನು ನಾವು ಖಂಡಿತ ಸಹಿಸುವುದಿಲ್ಲ. ಆದುದರಿಂದ ಚಿತ್ರಮಂದಿರ ಸೇರಿದಂತೆ ಇತರೆ ಸಾರ್ವಜನಿಕ ಸ್ಥಳಗಳಲ್ಲಿ, ಸಭೆ, ಸಮಾರಂಭಗಳಲ್ಲಿ ಯಾರಾದರೂ ದೈವಗಳನ್ನು ಅನುಕರಣೆ ಮಾಡಿದರೆ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪ್ರೇಕ್ಷಕರಿಗೆ ಖಡಕ್ ಸೂಚನೆ ಕೊಟ್ಟಿದ್ದಾರೆ.
ಇದನ್ನೂ ಓದಿ : ‘ಬಿಗ್ಬಾಸ್’ಗೆ ಸಂಕಷ್ಟ – ಕೂಡಲೇ ಬಿಗ್ಬಾಸ್ ಹೌಸ್ನ್ನು ಬಂದ್ ಮಾಡುವಂತೆ ಮಾಲಿನ್ಯ ನಿಯಂತ್ರಣ ಮಂಡಳಿ ನೋಟಿಸ್!







