CJI ಬಿ.ಆರ್ ಗವಾಯಿಗೆ ಶೂ ಎಸೆಯಲು ಯತ್ನಿಸಿದ ಕೇಸ್ – ವಕೀಲನ ವಿರುದ್ಧ ಕ್ರಮಕ್ಕೆ ಸುಪ್ರೀಂ ನಕಾರ.. ರಾಕೇಶ್ ಕಿಶೋರ್ ರಿಲೀಸ್!

ನವದೆಹಲಿ : ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಬಿ.ಆರ್ ಗವಾಯಿ ಅವರ ಮೇಲೆ ವಕೀಲ ರಾಕೇಶ್‌ ಕಿಶೋರ್‌ ನ್ಯಾಯಾಲಯದಲ್ಲಿ ಶೂ ಎಸೆಯಲು ಯತ್ನಿಸಿದ್ದ. ಈ ಸಂಬಂಧ ಪೊಲೀಸರು ವಕೀಲ ರಾಕೇಶ್‌ ಕಿಶೋರ್​ನ್ನು ಅರೆಸ್ಟ್ ಮಾಡಿದ್ದರು. ಆದರೆ ವಕೀಲ ರಾಕೇಶ್‌ ಕಿಶೋರ್‌ ವಿರುದ್ಧ ಆರೋಪ ಹೊರಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದ್ದು, ಈ ಹಿನ್ನೆಲೆ ಪೊಲೀಸರು ಆತನನ್ನು ರಿಲೀಸ್ ಮಾಡಿದ್ದಾರೆ.

ಈ ಹಿಂದೆ CJI ಬಿ. ಆರ್. ಗವಾಯಿ ಅವರು ಹಿಂದೂ ಧರ್ಮ & ವಿಷ್ಣುವಿನ ಬಗ್ಗೆ ಹೇಳಿಕೆ ನೀಡಿದ್ದರು. ಹಾಗಾಗಿ ಸೋಮವಾರ ವಕೀಲ ರಾಕೇಶ್‌ ಕಿಶೋರ್‌ ಕೃತ್ಯವೆಸಗಿದ್ದು, ಶೂ ಎಸೆತ ಯತ್ನ ಘಟನೆ ನಡೆದ ಕೂಡಲೇ ದೆಹಲಿ ಪೊಲೀಸರು ಕಿಶೋರ್‌ನನ್ನು ವಶಕ್ಕೆ ಪಡೆದು ತಿಲಕ್ ಮಾರ್ಗ ಪೊಲೀಸ್ ಠಾಣೆಯಲ್ಲಿ 3 ಗಂಟೆಗಳಿಗೂ ಹೆಚ್ಚು ಕಾಲ ವಿಚಾರಣೆ ನಡೆಸಿದರು.

ಇನ್ನು, ಮೇರಾ ಸಂದೇಶ್ ಹರ್ ಸನಾತನಿ ಕೆ ಲಿಯೇ ಹೈ… ಸನಾತನ ಧರ್ಮ ಕಾ ಅಪಮಾನ್‌ ನಹೀ ಸಹೇಗಾ ಹಿಂದೂಸ್ತಾನ್ ಎಂಬ ಪತ್ರವನ್ನು ಆತನಿಂದ ಅಧಿಕಾರಿಗಳು ವಶಪಡಿಸಿಕೊಂಡಿದ್ದರು. ಸುಪ್ರೀಂ ಕೋರ್ಟ್ ವಕೀಲರ ಸಂಘ, ಶಹದಾರಾ ವಕೀಲರ ಸಂಘ ​​ಮತ್ತು ದೆಹಲಿಯ ವಕೀಲರ ಪರಷತ್ತಿನ ಗುರುತಿನ ಚೀಟಿಗಳನ್ನು ಕಿಶೋರ್‌ ಹೊಂದಿದ್ದ.

ನ್ಯಾಯಾಲಯವು ಆಪಾದಿತ ವಕೀಲನ ವಿರುದ್ಧ ಯಾವುದೇ ಆರೋಪಗಳನ್ನು ಹೊರಿಸುವುದಿಲ್ಲ ಎಂದು ವಿಚಾರಣೆಯ ನಂತರ, ಸುಪ್ರೀಂ ಕೋರ್ಟ್‌ನ ರಿಜಿಸ್ಟ್ರಾರ್ ಜನರಲ್ ಅವರು ಔಪಚಾರಿಕವಾಗಿ ತಿಳಿಸಿದ ಹಿನ್ನೆಲೆಯಲ್ಲಿ ಕಿಶೋರ್‌ನನ್ನು ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಿಶೋರ್‌ನ ಶೂಗಳು ಮತ್ತು ದಾಖಲೆಗಳನ್ನು ಹಿಂತಿರುಗಿಸುವಂತೆಯೂ ರಿಜಿಸ್ಟ್ರಾರ್‌ ಜನರಲ್‌ ಅವರು ಪೊಲೀಸರಿಗೆ ನಿರ್ದೇಶಿಸಿದ್ದರು.

ಘಟನೆ ಬಗ್ಗೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದ್ದಂತೆಯೇ ಭಾರತೀಯ ವಕೀಲರ ಪರಿಷತ್ತು ಆತನ ವಕೀಲಿಕೆ ಪರವಾನಗಿಯನ್ನು ಅಮಾನತುಗೊಳಿಸಿತು. ಈ ಮಧ್ಯೆ ಯಾವುದೇ ಮುಜಗರಕ್ಕೆ ಒಳಗಾಗದ ಸಿಜೆಐ ಗವಾಯಿ ಅವರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಪ್ರಶಂಸೆ ವ್ಯಕ್ತಪಡಿಸಿದರು. ಘಟನೆಯನ್ನು ಖಂಡಿಸಿದ ಮೋದಿ ಅವರು ಸಿಜೆಐ ಅವರ ಶಾಂತ ವರ್ತನೆಯನ್ನು ಕೊಂಡಾಡಿದರು.

ಇದನ್ನೂ ಓದಿ : ಪ್ರೇಕ್ಷಕರನ್ನು ಸೆಳೆಯುತ್ತಿದೆ ‘ಟೈಮ್ ಪಾಸ್’ ಟೀಸರ್ – ಅ.17ಕ್ಕೆ ಸಿನಿಮಾ ತೆರೆಗೆ!

Btv Kannada
Author: Btv Kannada

Read More