ಬೆಂಗಳೂರು : ಸ್ಯಾಂಡಲ್ವುಡ್ ನಟಿಗೆ ಸಿನಿಮಾ ಹೆಸರಲ್ಲಿ ಲೈಂಗಿಕ ಕಿರುಕುಳ ನೀಡಿರುವ ಆರೋಪದಡಿ ನಟ, ನಿರ್ದೇಶಕ, ನಿರ್ಮಾಪಕ ಹೇಮಂತ್ ವಿರುದ್ಧ ಪ್ರಕರಣ ದಾಖಲಾಗಿದೆ. ನಟಿ ನೀಡಿದ ದೂರಿನ ಮೇರೆಗೆ ಆರೋಪಿ ಹೇಮಂತ್ನನ್ನು ರಾಜಾಜಿನಗರ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ನಟ, ನಿರ್ಮಾಪಕ ಹೇಮಂತ್ 2022ರಲ್ಲಿ ನಟಿಗೆ ಪರಿಚಯವಾಗಿದ್ದ. ನಂತರ ಯುವತಿ ‘ರಿಚ್ಚಿ’ ಎನ್ನುವ ಚಿತ್ರಕ್ಕೆ ನಟಿಯಾಗಿ ಆಯ್ಕೆಯಾಗಿದ್ದರು. ನಟಿಗೆ 2 ಲಕ್ಷ ರೂಪಾಯಿ ಸಂಭಾವನೆ ನೀಡೋದಾಗಿ ಅಗ್ರಿಮೆಂಟ್ ಮಾಡಿಕೊಂಡಿದ್ದರು. ಹೇಮಂತ್ ಮುಂಗಡವಾಗಿ 60 ಸಾವಿರ ಹಣ ಕೂಡ ನೀಡಿದ್ದ. ಬಳಿಕ ಅಶ್ಲೀಲ ಬಟ್ಟೆ ತೊಡಬೇಕು, ಅಶ್ಲೀಲವಾಗಿ ನಟಿಸಬೇಕು ಎಂದು ಹೇಮಂತ್ ಒತ್ತಾಯಿಸಿದ್ದ. ಅಷ್ಟೇ ಅಲ್ಲದೆ ಹೇಮಂತ್ ಅಸಭ್ಯ ರೀತಿಯಲ್ಲಿ ನಟಿಯನ್ನು ಸ್ಪರ್ಶಿಸಿದ ಆರೋಪ ಕೂಡ ಕೇಳಿಬಂದಿದೆ.

ಇನ್ನು ಮುಂಬೈಗೆ ಹೋಗಿದ್ದಾಗಲೂ ನಟಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪವಿದ್ದು, ನಟಿ ನಿರಾಕರಿಸಿದಕ್ಕೆ ಹೇಮಂತ್ ರೌಡಿಗಳನ್ನು ಬಿಟ್ಟು ಬೆದರಿಸಿದ್ದಾನೆ. ಶೂಟಿಂಗ್ ಮುಗಿದ ಬಳಿಕ ಸಂಭಾವನೆಗೆ ನೀಡಿದ್ದ ಚೆಕ್ ಕೂಡ ಬೌನ್ಸ್ ಆಗಿದೆ. ಸೆನ್ಸಾರ್ ಆಗದ ದೃಶ್ಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಆರೋಪ ಕೂಡ ಕೇಳಿಬಂದಿದ್ದು, ಸದ್ಯ ರಾಜಾಜಿನಗರ ಪೊಲೀಸರು ಹೇಮಂತ್ನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ.


ಇದನ್ನೂ ಓದಿ : ನಾನು ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ದೂರು ಕೊಟ್ಟಿಲ್ಲ – ಪತ್ರಿಕಾ ವರದಿಗೆ ಮಾಜಿ ಕಾರ್ಪೊರೇಟರ್ ಎಲ್ ಶ್ರೀನಿವಾಸ್ ಆಕ್ರೋಶ!







