ಬೆಂಗಳೂರು : ರಾಜ್ಯದೆಲ್ಲೆಡೆ ಜಾತಿ ಗಣತಿ ನಡೆಯುತ್ತಿದ್ದು, ಸಿಲಿಕಾನ್ ಸಿಟಿಯಲ್ಲಿ ಇಂದಿನಿಂದ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಆರಂಭವಾಗಿದೆ. ಇಂದಿನಿಂದ ಸಿಬ್ಬಂದಿಗಳು ಮನೆ ಮನೆಗೆ ಭೇಟಿ ನೀಡಿ ಮಾಹಿತಿ ಕಲೆಹಾಕಲಿದ್ದು, ಒಟ್ಟು 32 ಲಕ್ಷ ಮನೆಗಳಿಗೆ ಭೇಟಿ ನೀಡಿ ಸಮೀಕ್ಷೆದಾರರು ಸಮೀಕ್ಷೆ ನಡೆಸಲಿದ್ದಾರೆ.
ಇಂದಿನಿಂದ ಗ್ರೇಟರ್ ಬೆಂಗಳೂರು ಪ್ರದೇಶದ (ಜಿಬಿಎ) ವ್ಯಾಪ್ತಿಯಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ಕಾರ್ಯ ಆರಂಭವಾಗಿದ್ದು. ಜಿಬಿಎ ವ್ಯಾಪ್ತಿಯ ಐದು ಪಾಲಿಕೆ ಸಿಬ್ಬಂದಿಗಳಿಂದ ಸಮೀಕ್ಷೆ ನಡೆಯಲಿದೆ. 10 ಜನ ಗಣತಿದಾರರಿಗೆ ಒಬ್ಬ ಸೂಪರ್ ವೈಸರ್ನ್ನು ನೇಮಕ ಮಾಡಿದ್ದು, ಪ್ರತಿ ವಾರ್ಡ್ಗೆ ತಲಾ 70 ರಿಂದ 80 ಸಮೀಕ್ಷಕರ ನಿಯೋಜನೆ ಮಾಡಲಾಗಿದೆ.
ಇನ್ನು ಒಬ್ಬೊಬ್ಬ ಸಮೀಕ್ಷಕನಿಗೆ ದಿನಕ್ಕೆ ಕನಿಷ್ಠ 20 ಮನೆ ಸರ್ವೆ ಮಾಡಲು ಟಾಸ್ಕ್ ನೀಡಿದ್ದು, ಬೆಂಗಳೂರಿನಲ್ಲಿ 15 ದಿನದಲ್ಲಿ ಸಮೀಕ್ಷೆ ಪೂರ್ಣಗೊಳಿಸುವ ನಿರೀಕ್ಷೆಯಿದೆ.
ಸಮೀಕ್ಷೆ ಮೇಲ್ವಿಚಾರಣೆಗೆ 34 ನೂಡಲ್ ಆಫೀಸರ್ಗಳನ್ನು ನಿಯೋಜಿಸಿದ್ದು, ಹಿರಿಯ KAS ಅಧಿಕಾರಿಗಳ ನೇತೃತ್ವದಲ್ಲಿ ಮೇಲ್ವಿಚಾರಣೆ ಪ್ಲ್ಯಾನ್ ಮಾಡಿದ್ದಾರೆ.
ಬೆಸ್ಕಾಂ ಸಿಬ್ಬಂದಿ ಮಾಡಿರುವ ಜಿಯೋಟ್ಯಾಗ್ ಆಧರಿಸಿ ಸಮೀಕ್ಷೆ ನಡೆಯಲಿದ್ದು, GBA ವ್ಯಾಪ್ತಿಯಲ್ಲಿ 32 ಲಕ್ಷ ಮನೆಗಳ ಸಮೀಕ್ಷೆ ನಡೆಸಲಿದ್ದಾರೆ. ಸಮೀಕ್ಷೆಯಲ್ಲಿ ವಿವಿಧ ಇಲಾಖೆಗಳ 17 ಸಾವಿರ ಸಿಬ್ಬಂದಿಗಳು ಭಾಗಿಯಾಗಲಿದ್ದಾರೆ.
ಜಾತಿ ಸಮೀಕ್ಷೆಗೆ ಒಕ್ಕಲಿಗ ಜಗದ್ಗುರು ನಿರ್ಮಲಾನಂದನಾಥ ಶ್ರೀಗಳು ಬೆಂಬಲಿಸಿದ್ದಾರೆ. ಈ ಬಗ್ಗೆ ನಿರ್ಮಲಾನಂದನಾಥ ಸ್ವಾಮೀಜಿ ಪ್ರತಿಕ್ರಿಯಿಸಿ, 94 ವರ್ಷಗಳ ಬಳಿಕ ನಮ್ಮ ಸರ್ಕಾರ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆ ಮಾಡ್ತಿದೆ, ಮಕ್ಕಳು, ಮೊಮ್ಮಕ್ಕಳ ಹಿತ ದೃಷ್ಟಿಯಿಂದ ಜಾತಿ ಸಮೀಕ್ಷೆ ಬಹಳ ಮುಖ್ಯ. ಧರ್ಮದ ಕಾಲಂ 8 ರಲ್ಲಿ ಹಿಂದೂ ಧರ್ಮ ಅಂತಾ ಬರೆಸಿ, ಕಾಲಂ 9ರ ಜಾತಿ ಅಡಿಯಲ್ಲಿ ಒಕ್ಕಲಿಗ ಅಂತಾನೇ ಬರೆಸಿ. 10ನೇ ಕಾಲಂನ ಉಪಜಾತಿಯಲ್ಲಿ ಕೂಡಾ ಒಕ್ಕಲಿಗ ಅಂತಾನೇ ಬರೆಸಿ, ನಮ್ಮ ಒಕ್ಕಲಿಗ ಜನಾಂಗವನ್ನ ನಾವು ವ್ಯವಹಾರ ಭಾಷೆಯಲ್ಲಿ ಗೌಡ ಅಂತಾ ಬಳಸುತ್ತೇವೆ. ಆದ್ರೆ, ಜಾತಿ ಗಣತಿಯಲ್ಲಿ ಎಲ್ಲೂ ಕೂಡಾ ಗೌಡ ಅಂತಾ ಬರೆಸಬೇಡಿ, ನಮ್ಮ ನಮ್ಮ ಉಪಜಾತಿಗಳು ಕುಟುಂಬ, ಆಚರಣೆಗೆ ಸಿಮೀತವಾಗಿವೆ. ನಾವೆಲ್ಲ ಒಂದೇ ಜಾತಿ ಅದು ಒಕ್ಕಲಿಗ, ಕೋಡ್ ನಂಬರ್ 1541, ಆನ್ಲೈನ್ ಮೂಲಕವೂ ಕೂಡಾ ಸಮೀಕ್ಷೆ ಮಾಹಿತಿ ಒದಗಿಸಿ ಅಪ್ಲೋಡ್ ಮಾಡಿ. ಜಾತಿ ಸಮೀಕ್ಷೆಯಲ್ಲಿ ಎಲ್ಲರೂ ತಪ್ಪದೇ ಭಾಗವಹಿಸಿ ಎಂದು ಆದಿಚುಂಚನಗಿರಿ ಮಠ ನಿರ್ಮಲಾನಂದನಾಥ ಶ್ರೀಗಳು ಮನವಿ ಮಾಡಿದ್ದಾರೆ.
ಇದನ್ನೂ ಓದಿ : 2021ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಘೋಷಣೆ – ರಕ್ಷಿತ್ ಶೆಟ್ಟಿಗೆ ಅತ್ಯುತ್ತಮ ನಟ ಅವಾರ್ಡ್!







