ಚಾಮರಾಜನಗರ : ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ವನ್ಯಧಾಮದಲ್ಲಿ 5 ಹುಲಿಗಳು ಸಾವಿಗೀಡಾಗಿದ್ದ ಪ್ರಕರಣ ಸಾಕಷ್ಟು ಸಂಚಲನ ಸೃಷ್ಟಿಸಿತ್ತು. ಆ ನಂತರ ಹುಲಿಗಳ ರಕ್ಷಣೆ ನಿಟ್ಟಿನಲ್ಲಿ ಕಠಿಣ ಕ್ರಮಗಳನ್ನು ಅರಣ್ಯ ಇಲಾಖೆ ತೆಗೆದುಕೊಂಡಿತ್ತು. ಇದೀಗ ಮತ್ತೆ ಮಲೆ ಮಹದೇಶ್ವರ ವನ್ಯಧಾಮದಲ್ಲಿ ಹುಲಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಹುಲಿಯ ಅರ್ಧ ದೇಹ ಪತ್ತೆಯಾಗಿದೆ.

ಈ ಬಗ್ಗೆ ಮಲೆ ಮಹದೇಶ್ವರ ಡಿಸಿಎಫ್ ಭಾಸ್ಕರ್ ಪ್ರತಿಕ್ರಿಯಿಸಿ, ಹನೂರು ಬೀಟ್ನಲ್ಲಿ ಗಸ್ತು ತಿರುಗುವ ವೇಳೆ ಈ ಪ್ರಕರಣ ಬೆಳಕಿಗೆ ಬಂದಿದೆ. ಮಣ್ಣಿನ ಮೇಲ್ಬಾಗ ನೋಣಗಳ ಓಡಾಟ ಹಾಗೂ ವಾಸನೆಯಿಂದ ಹುಲಿಯ ಮೃತದೇಹ ಸಿಕ್ಕಿದೆ. ಹುಲಿ ದೇಹದ ಎರಡು ಭಾಗ ಸಿಕ್ಕಿದೆ, ತಲೆ ಹಾಗೂ ಮುಂದಿನ ಎರಡು ಕಾಲಿನ ಇತ್ತು ಅಲ್ಲದೇ ಮಧ್ಯಭಾಗ ಸಿಕ್ಕಿದೆ. ರಾತ್ರಿ ಹುಡುಕಾಟ ನಡೆಸಿದ್ರೂ ಕೂಡ ಮತ್ತೊಂದು ಭಾಗ ಸಿಕ್ಕಿಲ್ಲ. ಪೊಲೀಸ್ ಇಲಾಖೆ ಡಾಗ್ ಸ್ಕ್ವಾಡ್, ಬೆರಳಚ್ಚು ತಜ್ಞರು ಕರೆಸಿ ಹುಡುಕಾಡಿದ ಬಳಿಕ 50 ಮೀಟರ್ ದೂರದಲ್ಲಿ ಮತ್ತೊಂದು ಭಾಗ ಸಿಕ್ಕಿದೆ ಎಂದಿದ್ದಾರೆ.

ಇನ್ನು ಹೊಟ್ಟೆ ಭಾಗ ಕೂಡ ಬೇರೆಯಿತ್ತು. ಮೂರು ಭಾಗವಾಗಿ ಕತ್ತರಿಸಿ ಬೇರೆಬೇರೆ ಕಡೆ ಹೂತು ಹಾಕುವ ಕೆಲಸ ಮಾಡಲಾಗಿತ್ತು. ಮೇಲ್ನೋಟಕ್ಕೆ ವಿಷ ಪ್ರಾಶನ ಅನಿಸುತ್ತದೆ, FSL ವರದಿ ಬಳಿಕ ಹುಲಿಯ ಸಾವಿಗೆ ಕಾರಣ ಗೊತ್ತಾಗುತ್ತೆ. ಸುಮಾರು 12 ವರ್ಷ ವಯಸ್ಸಿನ ಗಂಡು ಹುಲಿ ಸತ್ತಿದೆ. ಬೇಟೆಯಾಡಿದ ರೀತಿ ಗುಂಡು ಹೊಡೆದಿರುವುದು ಕಂಡುಬಂದಿಲ್ಲ ಎಂದು ಮಲೆ ಮಹದೇಶ್ವರ ಡಿಸಿಎಫ್ ಭಾಸ್ಕರ್ ಹೇಳಿದ್ದಾರೆ.
ಇದನ್ನೂ ಓದಿ : ವಿಜಯಪುರ : ಲಾರಿಗೆ KSRTC ಬಸ್ ಡಿಕ್ಕಿ – ಪ್ರಯಾಣಿಕರಿಗೆ ಗಂಭೀರ ಗಾಯ!







