ಬಿಜೆಪಿಗಿಂತ ಕಾಂಗ್ರೆಸ್​ನಲ್ಲಿ ಕಮಿಷನ್ ಜಾಸ್ತಿ.. ಕಾಮಗಾರಿ ಬಾಕಿ ಹಣ ಬಿಡುಗಡೆ ಮಾಡಿಲ್ಲ – ಸಿಎಂಗೆ ರಾಜ್ಯ ಗುತ್ತಿಗೆದಾರರ ಸಂಘ ಪತ್ರ!

ಬೆಂಗಳೂರು : ಕಾಮಗಾರಿಗಳನ್ನು ಕೈಗೊಳ್ಳುವ ಎಂಟು ಇಲಾಖೆಗಳು ಗುತ್ತಿಗೆದಾರರ ಬಾಕಿ ಹಣವನ್ನು ಈವರೆಗೂ ಬಿಡುಗಡೆ ಮಾಡದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ರಾಜ್ಯ ಗುತ್ತಿಗೆದಾರರ ಸಂಘ, ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದೆ.

ತಾವುಗಳು ಸುಮಾರು 2 ವರ್ಷಗಳಿಂದ ಗುತ್ತಿಗೆದಾರರಿಗೆ ಸಂಬಂಧಪಟ್ಟ ಬಾಕಿ ಇರುವ ಹಣ ಬಿಡುಗಡೆ ವಿಚಾರವಾಗಲಿ ಮತ್ತು ಇತರೆ ಸಮಸ್ಯೆಗಳ ಬಗ್ಗೆ ನಿಮ್ಮ ಜೊತೆ ಹಲವಾರು ಸಾರಿ ಪದಾಧಿಕಾರಿಗಳು ಬಂದು ಚರ್ಚೆ ಮಾಡಿರುತ್ತೇವೆ. ನಮ್ಮ ಸಂಘವು ಭ್ರಷ್ಟಚಾರದ ವಿರುದ್ಧ ನಡೆಸಿದ ಹೋರಾಟದ ಫಲವಾಗಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬರಲು ಕಾರಣರಾಗಿದ್ದೇವೆ. ಆದರೆ ನಮ್ಮನ್ನು ಪ್ರತೀ ಸಾರಿ ಸಮಾದಾನ ಮಾಡಿ, ಸಮಸ್ಯೆಗಳನ್ನು ಬಗೆ ಹರಿಸುವ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಸೂಚನೆ ಕೊಟ್ಟಿರುತ್ತೀರಿ. ನಾವುಗಳು ಇದುವರೆವಿಗೂ ತಮಗೆ ಗೌರವ ಕೊಟ್ಟು, ನಮ್ಮ ಸಮಸ್ಯೆಯನ್ನು ಬಗೆಹರಿಸುತ್ತೀರಿ ಎಂಬ ಅಪಾರ ನಂಬಿಕೆ ಹಾಗೂ ನಿಮ್ಮ ಮೇಲಿನ ಭರವಸೆಯಿಂದ ನಮ್ಮ ಎಲ್ಲಾ ಜಿಲ್ಲೆಗಳ ಗುತ್ತಿಗೆದಾರರಿಗೆ ಇದುವರೆಗೂ ಸಮದಾನ ಮಾಡಿಕೊಂಡು ಬಂದಿರುತ್ತೇವೆ ಎಂದು ಸಂಘದ ಅಧ್ಯಕ್ಷ ಆರ್. ಮಂಜುನಾಥ್, ಸಿಎಂಗೆ ಪತ್ರ ಬರೆದು ಬೇಸರ ವ್ಯಕ್ತಪಡಿಸಿದ್ದಾರೆ.

ಇದುವರೆಗೂ ನಮಗೆ ನಿಮ್ಮ ಸರ್ಕಾರದಿಂದ ಯಾವುದೇ ರೀತಿ ಪ್ರಯೋಜನವಾಗಿರುವುದಿಲ್ಲ ಎಂದು ರಾಜ್ಯದ ಎಲ್ಲಾ ಜಿಲ್ಲಾ ಗುತ್ತಿಗೆದಾರರ ಸಂಘದ ಅಧ್ಯಕ್ಷರುಗಳು ನಮಗೆ ಪತ್ರದ ಮೂಲಕ ತಮ್ಮ ತಮ್ಮ ಸಮಸ್ಯೆಗಳನ್ನು ತಿಳಿಸಿರುತ್ತಾರೆ. ಕಾಮಗಾರಿಗಳನ್ನು ಕೈಗೊಳ್ಳುವ ಎಂಟು ಇಲಾಖೆಗಳಿಂದ ರಾಜ್ಯ ಗುತ್ತಿಗೆದಾರರ ಬಾಕಿ ಇರುವ ಹಣವನ್ನು ಇದುವರೆವಿಗೂ ತಾವುಗಳು ಬಿಡುಗಡೆ ಮಾಡಿರುವುದಿಲ್ಲ. ಸಂಬಂಧಪಟ್ಟಂತೆ ಎಲ್ಲಾ ಇಲಾಖೆಗಳ ಸಚಿವರುಗಳನ್ನು, ಸರ್ಕಾರದ ಕಾರ್ಯದರ್ಶಿಗಳನ್ನು ಬೇಟಿ ಮಾಡಿ ಹಣ ಬಿಡುಗಡೆ ವಿಚಾರವಾಗಿ ಹಲವಾರು ಸಾರಿ ಚರ್ಚಿಸಿದರೂ ಸಹ ಯಾವುದೇ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.

ತಾವುಗಳು ವಿರೋದ ಪಕ್ಷದ ನಾಯಕರಿದ್ದಾಗ, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಗುತ್ತಿಗೆದಾರರ ಬಾಕಿ ಹಣ ಬಿಡುಗಡೆಗೆ ಯಾವುದೇ ಕಮಿಷನ್ ತೆಗೆದುಕೊಳ್ಳುವುದಿಲ್ಲ ಎಂದು ತಿಳಿಸಿರುತ್ತೀರಿ. ಆದರೆ ಹಿಂದಿನ ಸರ್ಕಾರಕ್ಕಿಂತ ಮೇಲ್ಕಂಡ ಎಲ್ಲಾ ಇಲಾಖೆಗಳಲ್ಲಿ ಈಗ ಕಮಿಷನ್ ದುಪ್ಪಟ್ಟು ಆಗಿರುತ್ತದೆ ಎಂದು ಆರ್. ಮಂಜುನಾಥ್ ವಿಷಾದ ವ್ಯಕ್ತಪಡಿಸಿದ್ದಾರೆ.

ಇನ್ನು ಪೌರಾಡಳಿತ, ನಗರಾಭಿವೃದ್ಧಿ ಮತ್ತು ನಗರ ಯೋಜನೆ ಇಲಾಖೆ ಹಾಗೂ ಕಾರ್ಮಿಕ ಇಲಾಖೆಯ ಅಧಿಕಾರಿಗಳು ತಮ್ಮ ಆದೇಶವನ್ನು ಮೀರಿ ಟೆಂಡರ್‌ಗಳನ್ನು ಪ್ಯಾಕೇಜ್ ರೂಪದಲ್ಲಿ ಪರಿವರ್ತಿಸಿ, ತಮಗೆ ಬೇಕಾದ ಬಲಾಡ್ಯ ಗುತ್ತಿಗೆದಾರರಿಗೆ ಅನುಕೂಲವಾಗುವ ರೀತಿಯಲ್ಲಿ ಟೆಂಡ‌ರ್ ಪ್ರಕ್ರಿಯೆಯನ್ನು ಮಾಡುತ್ತಿದ್ದಾರೆ. ಈ ವಿಚಾರವಾಗಿ ರಾಜ್ಯ ಸಂಘವು ಪದಾಧಿಕಾರಿಗಳ ಸಭೆ ನಡೆಸಲು ಹಲವಾರು ಸಾರಿ ಪತ್ರದ ಮುಖೇನ ಮತ್ತು ಮೌಖಿಕವಾಗಿ ತಿಳಿಸಿದರು ಸಹ ಸಂಬಂಧಪಟ್ಟ ಸಚಿವರು ಹಾಗೂ ಅಧಿಕಾರಿಗಳು ನಮ್ಮ ಮನವಿಯನ್ನು ಪರಿಗಣಿಸುತ್ತಿಲ್ಲ ಎಂದು ಸಂಘದ ಅಧ್ಯಕ್ಷ ಆರ್. ಮಂಜುನಾಥ್, ಸಿಎಂಗೆ ಪತ್ರ ಬರೆದು ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : ಕಾರಿನ ಇಂಡಿಕೇಟರ್ ಹಾಕಿಲ್ಲ ಎಂದು ರೊಚ್ಚಿಗೆದ್ದ ಬೈಕ್ ಸವಾರ – ಅವಾಚ್ಯ ಶಬ್ಧಗಳಿಂದ ನಿಂದಿಸಿ ಕ್ಯಾಬ್​ ಚಾಲಕನ ಮೇಲೆ ಹಲ್ಲೆ!

Btv Kannada
Author: Btv Kannada

Read More