ಬಾಗಲಕೋಟೆ : ರಾಜ್ಯದಲ್ಲಿ ಮತ್ತೆ ಮಳೆರಾಯನ ಆರ್ಭಟ ಶುರುವಾಗಿದ್ದು, ಧಾರಾಕಾರ ಮಳೆಗೆ ಹಲವೆಡೆ ಅವಾಂತರಗಳಾಗಿದೆ. ಬಾಗಲಕೋಟೆ ಜಿಲ್ಲೆಯ ರಬಕವಿಬನಹಟ್ಟಿ ತಾಲೂಕಿನ ಮಹಾಲಿಂಗಪುರದಲ್ಲಿ ಮನೆ ಮೇಲ್ಚಾವಣಿ ಮತ್ತು ಗೋಡೆ ಕುಸಿದು ಬಾಲಕ ಸಾವನ್ನಪ್ಪಿರುವಂತಹ ಭೀಕರ ಘಟನೆ ನಡೆದಿದೆ.
ಬೆಳಗಿನ ಜಾವ 5 ಗಂಟೆಗೆ ಮನೆಯ ಮೇಲ್ಚಾವಣಿ ಮತ್ತು ಗೋಡೆ ಕುಸಿದುಬಿದ್ದು, ದರ್ಶನ್ ಲಾತೂರ(11) ಮೃತಪಟ್ಟಿದ್ದಾನೆ. ಮತ್ತೋರ್ವ ಬಾಲಕ ಶ್ರೀಶೈಲ್ಗೆ ಗಂಭೀರ ಗಾಯಗಳಾಗಿವೆ.
ಮೃತ ದರ್ಶನ್ ಲಾತೂರ, ನಾಗಪ್ಪ ಲಾತೂರ್ ಎಂಬುವವರ ಮಗ. ಮಹಾಲಿಂಗಪುರದ ಅಂಬೇಡ್ಕರ್ ವೃತ್ತದ ಬಳಿ ಮನೆ ಇದ್ದು, ಇಬ್ಬರು ಮಕ್ಕಳು ಮನೆಯ ಕೋಣೆಯಲ್ಲಿ ತಾಯಿಯೊಂದಿಗೆ ಮಲಗಿದ್ದರು. ಬೆಳಗ್ಗೆ ತಾಯಿ ಎದ್ದು ಬೇರೆ ಕೊಠಡಿಗೆ ಬರುತ್ತಿದ್ದಂತೆ ಇತ್ತ ಗೋಡೆ ಕುಸಿದುಬಿದ್ದಿದೆ. ಅವಘಡದಲ್ಲಿ ದರ್ಶನ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಇನ್ನು ಗಾಯಗೊಂಡ ಬಾಲಕ ಶ್ರೀಶೈಲ್ಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಕಂದಾಯ ಅಧಿಕಾರಿಗಳು ಮತ್ತು ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಇದನ್ನೂ ಓದಿ : ಪೂಜೆ ನೆಪದಲ್ಲಿ ಚಿನ್ನಾಭರಣ ಕಳ್ಳತನ ಆರೋಪ – ಅರ್ಚಕ ರಮೇಶ್ ಶಾಸ್ತ್ರಿ ವಿರುದ್ಧ ದೂರು ದಾಖಲು!







