ಕರ್ನಾಟಕದಲ್ಲಿ ಹಿಂದಿ ಭಾಷೆ ಹೇರಿಕೆ ವಿರೋಧ – 41 ಕರವೇ ಕಾರ್ಯಕರ್ತರ ವಿರುದ್ದ FIR!

ಬೆಂಗಳೂರು : ಕರ್ನಾಟಕ ರಾಜ್ಯ ಸೇರಿ ದೇಶದಲ್ಲಿ ದಿನೇ ದಿನೇ ಹಿಂದಿ ಭಾಷೆ ಹೇರಿಕೆಯ ಪ್ರವೃತ್ತಿ ಹೆಚ್ಚಾಗುತ್ತಿದೆ. ಕೇಂದ್ರ ಸರ್ಕಾರದ ಹಿಂದಿ ಹೇರಿಕೆಯ ವಿರುದ್ಧ ದಕ್ಷಿಣ ಭಾರತದ ರಾಜ್ಯಗಳು ತೀವ್ರ ವಿರೋಧ ವ್ಯಕ್ತಪಡಿಸುತ್ತಿದೆ. ನಿನ್ನೆ ಹಿಂದಿ ಹೇರಿಕೆಯ ಸಭೆ ನಡೆಯುತ್ತಿದ್ದ ಬೆಂಗಳೂರಿನ ತಾಜ್ ವೆಸ್ಟೆಂಡ್ ಹೋಟೆಲ್​ಗೆ ಕರವೇ ಕಾರ್ಯಕರ್ತರು ನುಗ್ಗಿ ಬ್ಯಾನರ್​ಗಳನ್ನು ಧ್ವಂಸಗೊಳಿಸಿದ್ದರು. ಇದೀಗ ಕರ್ನಾಟಕದಲ್ಲಿ ಹಿಂದಿ ಭಾಷೆ ಹೇರಿಕೆ ವಿರೋಧಿಸಿದ್ದಕ್ಕೆ ಕರವೇ ಸಂಘಟನೆಯ 41 ಕಾರ್ಯಕರ್ತರ ವಿರುದ್ದ ಬೆಂಗಳೂರಿನ ಹೈಗ್ರೌಂಡ್ ಠಾಣೆಯಲ್ಲಿ FIR ದಾಖಲಾಗಿದೆ.

ಹಿಂದಿ ಭಾಷೆಯ ಕುರಿತು ರೇಸ್ ಕೋರ್ಸ್ ರಸ್ತೆಯ ತಾಜ್ ವೆಸ್ಟೆಂಡ್ ಹೋಟೆಲ್​ನಲ್ಲಿ ನಡೆಯುತ್ತಿದ್ದ ಸಂಸದೀಯ ಸಮಿತಿಯ ಸಭೆಗೆ ಕರವೇ ಅಡ್ಡಿ ಪಡಿಸಿತ್ತು. ಈ ವೇಳೆ ಹೈಗ್ರೌಂಡ್ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ಹತೋಟಿಗೆ ತಂದಿದ್ದರು. ಭಾರತ ಸರ್ಕಾರದ ರೀಜನಲ್ ಡೈರೆಕ್ಟರ್ ಕೃಷ್ಣಮೂರ್ತಿ ನೀಡಿದ ದೂರಿನ ಮೇರೆಗೆ ಕರವೇ ಸಂಘಟನೆಯ 41 ಕಾರ್ಯಕರ್ತರ ವಿರುದ್ದ FIR ದಾಖಲಾಗಿದೆ. ಹಿಂದಿ ಪ್ರಗತಿ ಪರಿವೀಕ್ಷಣಾ ಸಭೆ ನಡೆಯುತ್ತಿದ್ದಾಗ ದಾಂಧಲೆ ಮಾಡಿದ್ದಾರೆ, ವಸ್ತುಗಳನ್ನ ಹೊಡೆದು ಹಾಕಿ ಪ್ರಾಣ ಬೆದರಿಕೆ ಹಾಕಿದ್ದಾರೆಂದು ಕೃಷ್ಣಮೂರ್ತಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಹಿಂದಿ ಭಾಷೆಗೆ ವಿರೋಧ ವ್ಯಕ್ತಪಡಿಸಿದ ಕರವೇ ಸಂಘಟನೆ ಕಾರ್ಯಕರ್ತರು ಜೈಲು ಪಾಲಾಗಿದ್ದು, ಹೈಗ್ರೌಂಡ್ ಪೊಲೀಸರು 41 ಕಾರ್ಯಕರ್ತರನ್ನು ಬಂಧಿಸಿ ಮೆಡಿಕಲ್ ಟೆಸ್ಟ್​ ಮಾಡಿಸಿದ್ದಾರೆ. ಬಳಿಕ ಕೋರಮಂಗಲದ ನ್ಯಾಯಾಧೀಶರ ನಿವಾಸದ ಮುಂದೆ ಕರವೇ ಮುಖಂಡರು ಹಾಜರಾಗಿದ್ದು, ಸದ್ಯ ಬಂಧಿತ 41 ಕರವೇ ಕಾರ್ಯಕರ್ತರಿಗೆ ನ್ಯಾಯಾಧೀಶರು ನ್ಯಾಯಾಂಗ ಬಂಧನ ವಿಧಿಸಿದ್ದಾರೆ.

ಕರವೇ 41 ಜನರ ಬಂಧನ ಹಿನ್ನೆಲೆ ಕರವೇ ರಾಜ್ಯಾಧ್ಯಕ್ಷ ನಾರಾಯಣ ಗೌಡ ಪ್ರತಿಕ್ರಿಯಿಸಿ, ಇತ್ತೀಚಿನ ದಿನಗಳಲ್ಲಿ ಅನೇಕ ರಾಜ್ಯಗಳಲ್ಲಿ ಬಲವಂತದ ಹಿಂದಿ ಹೇರಿಕೆ ಖಂಡಿಸಲಾಗ್ತಿದೆ. ಕಲ್ಕತ್ತಾದಲ್ಲಿ ದೊಡ್ಡ ರ್ಯಾಲಿ ನಡೀತು, ದ್ವಿಭಾಷಾ ಸಾಕು, ತ್ರಿಭಾಷಾ ಬೇಡ. ಕರ್ನಾಟಕ ರಕ್ಷಣಾ ವೇದಿಕೆ 26 ವರ್ಷಗಳಿಂದ ಹಿಂದಿ ವಿರುದ್ಧ ಹೋರಾಟ ಮಾಡುತ್ತಿದೆ, ಒಳಸಂಚುಗಳ ಮೂಲಕ ಬಲವಂತವಾಗಿ ಹಿಂದಿ ಹೇರಿಕೆಗೆ ಕೇಂದ್ರ ಸರ್ಕಾರ ಮುಂದಾಗಿದೆ, ನನ್ನ ಭಾಷೆ, ನನ್ನ ನಾಡು ಅಂತ ಜೈಲಿಗೆ ಹೋದವರು ಯಾವುದೇ ಕಾರಣಕ್ಕೂ ಅಂಜಬಾರದು ಎಂದು ಲಕ್ಷ ಲಕ್ಷ ಕರವೇ ಕಾರ್ಯಕರ್ತರಿಗೆ ಧೈರ್ಯ ತುಂಬಿದ್ದಾರೆ.

ಇದನ್ನೂ ಓದಿ : ನಕಲಿ ದಾಖಲೆ ಸೃಷ್ಟಿಸಿ ಒಂದು ಕೋಟಿ ದೋಖಾ – ಪೊಲೀಸ್ ಠಾಣೆ ಮೆಟ್ಟಿಲೇರಿದ ಚಿತ್ರ ನಿರ್ಮಾಪಕಿ ಲಕ್ಷ್ಮಿ ವೆಂಕಟೇಶ್!

Btv Kannada
Author: Btv Kannada

Read More