ಬೆಂಗಳೂರು : ನಕಲಿ ವಿಳಾಸ, ನಕಲಿ ಚೆಕ್ ಸೃಷ್ಟಿಸಿ 80- 90ರ ದಶಕದ ಖ್ಯಾತ ನಿರ್ಮಾಪಕಿ ಲಕ್ಷ್ಮಿ ವೆಂಕಟೇಶ್ ಅವರಿಗೆ ಒಂದು ಕೋಟಿ ವಂಚಿಸಿದ್ದು, ಈ ಸಂಬಂಧ ಇದೀಗ ಚಿತ್ರ ನಿರ್ಮಾಪಕಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ತನ್ನ ಚಿತ್ರವನ್ನ ಯೂಟ್ಯೂಬ್, ಒಟಿಟಿ ಇನ್ನಿತರ ಸೋಶಿಯಲ್ ಫ್ಲಾಟ್ ಫಾರ್ಮ್ಗೆ ಹಂಚಿಕೆ ಮಾಡಿರೋದನ್ನು ನೋಡಿ ನಿರ್ಮಾಪಕಿ ಶಾಕ್ ಆಗಿದ್ದಾರೆ. ಸದ್ಯ ನಿರ್ಮಾಪಕಿ ತಮ್ಮ ಬ್ಯಾನರ್ನಿಂದ ಚಿತ್ರ ನಿರ್ಮಾಣ ಸ್ಥಗಿತಗೊಳಿಸಿದ್ದಾರೆ. ನಿರ್ಮಾಪಕಿ ಲಕ್ಷ್ಮಿ ವೆಂಕಟೇಶ್ ಅವರ ಸಹಿಯನ್ನ ನಕಲಿಸಿ ಹಣ ನೀಡಿ ಚಿತ್ರ ಖರೀದಿಸಿರುವಂತೆ ಆರೋಪಿಗಳು ದಾಖಲೆ ಸೃಷ್ಟಿಸಿದ್ದಾರೆ. ಇದೀಗ ಆರೋಪಿಗಳಿಂದ ಒಂದು ಕೋಟಿ ನಷ್ಟವಾಗಿದೆ ಎಂದು ಗುರು ಮಮತಾ ಚಿತ್ರ ಮತ್ತು ಮಮತಾ ಮೂವೀಸ್ ಬ್ಯಾನರ್ನ ಮಾಲೀಕೆ ಲಕ್ಷ್ಮಿ ವೆಂಕಟೇಶ್ ದೂರು ನೀಡಿದ್ದಾರೆ.

ಡಾ. ವಿಷ್ಣುವರ್ಧನ್ ನಟನೆಯ 1983ರ ಚಿತ್ರ ಗಂಡುಗಲಿ ರಾಮ, ಅಶೋಕ್, ಆರತಿ ನಟನೆಯ 1981ರ ಗಣೇಶ ಮಹಿಮೆ, ಜಯಂತಿ ಅಭಿನಯದ 1979ರ ಮಲ್ಲಿಗೆ ಸಂಪಿಗೆ ಚಿತ್ರ ಸೇರಿ ಹಲವು ಚಿತ್ರ ನಿರ್ಮಾಣ ಮಾಡಿದ್ದ ನಿರ್ಮಾಪಕಿಗೆ ದೋಖಾ ಆಗಿದೆ. ಈ ಮೂರು ಚಿತ್ರಗಳನ್ನ ಖರೀದಿ ಮಾಡಿರೋದಾಗಿ ನಕಲಿ ದಾಖಲೆ ಸೃಷ್ಟಿಸಿದ್ದು, ಲಕ್ಷ್ಮಿ ವೆಂಕಟೇಶ್ ಅವರ ಹೆಸರಿನಲ್ಲಿ ನಕಲಿ ವಿಳಾಸ, ನಕಲಿ ಚೆಕ್ ಕೂಡ ಸೃಷ್ಟಿಸಿ ಚಿತ್ರ ಮಾರಾಟ ಮಾಡಲಾಗಿದೆ ಎಂದು ಆರೋಪಿಗಳು ನಂಬಿಸಿದ್ದಾರೆ.
ಎ.ಎನ್ ಜಗದೀಶ್, ಪುರುಷೋತ್ತಮ್, ರಸೂಲ್ ಎಂಬುವವರು ಈ ಕೃತ್ಯವೆಸಗಿದ್ದಾರೆ. ಚಿತ್ರಗಳನ್ನ ಏಜೆಂಟರ ಮೂಲಕ ಮಾರಾಟ ಮಾಡಲು ಮುಂದಾದಾಗ ಈ ವಿಚಾರ ಬಯಲಾಗಿದೆ. ನೀವು ಈಗಾಗಲೆ ಚಿತ್ರಗಳನ್ನ ಮಾರಾಟ ಮಾಡಿದ್ದೀರಾ ಎಂದು ಏಜೆಂಟ್ ಹೇಳಿದ್ದಾರೆ. ನಂತರ ಸೋಶಿಯಲ್ ಫ್ಲಾಟ್ ಫಾರ್ಮ್ ಪರಿಶೀಲನೆ ನಡೆಸಿದಾಗ ನಿರ್ಮಾಪಕಿಗೆ ಶಾಕ್ ಆಗಿದೆ. ಇದರಿಂದ ಒಂದು ಕೋಟಿ ನಷ್ಟ ಆಗಿದೆ ಎಂದು ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ನಿರ್ಮಾಪಕಿ ದೂರು ದಾಖಲಿಸಿದ್ದಾರೆ.


ಇದನ್ನೂ ಓದಿ : ಮಾರುತ ಚಿತ್ರದ “ನಮ್ಮಮ್ಮ ಸವದತ್ತಿ ಎಲ್ಲಮ್ಮ” ಹಾಡು ರಿಲೀಸ್ – ಭಕ್ತಿಪ್ರಧಾನ ಈ ಹಾಡಿಗೆ ಉಧೋ ಉಧೋ ಎನ್ನುತ್ತಿದೆ ಕರುನಾಡು!







