ಬೆಂಗಳೂರು : ಕನ್ನಡದ ಹಿರಿಯ ಸಾಹಿತಿ ಎಸ್.ಎಲ್ ಭೈರಪ್ಪ ಅವರು ಬೆಂಗಳೂರಿನ ಆರ್ಆರ್ ನಗರದ ರಾಷ್ಟ್ರೋತ್ಥಾನ ಆಸ್ಪತ್ರೆಯಲ್ಲಿ ಇಂದು ಇಹಲೋಕ ತ್ಯಜಿಸಿದ್ದಾರೆ. 94 ವರ್ಷದ ಎಸ್.ಎಲ್ ಭೈರಪ್ಪ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರ ನಿಧನಕ್ಕೆ ಪ್ರಧಾನಿ ಮೋದಿ ಸೇರಿ ಸನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಇದೀಗ ಭೈರಪ್ಪ ನಿಧನಕ್ಕೆ ಟ್ವೀಟ್ ಮೂಲಕ ಸಂತಾಪ ಸೂಚಿಸಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಭಾವುಕರಾಗಿದ್ದಾರೆ. ನಾಡಿನ ಹಿರಿಯ ದಿಗ್ಗಜ ಸಾಹಿತಿ, ಕಾದಂಬರಿಕಾರ, ಸಂಶೋಧಕರು ಮತ್ತು ಲೇಖಕರಾದ ಪದ್ಮಭೂಷಣ ಡಾ ಎಸ್.ಎಲ್ ಭೈರಪ್ಪನವರ ನಿಧನದ ಸುದ್ದಿ ಕೇಳಿ ತೀರ ನೋವಾಗಿದೆ. 94 ವರ್ಷದ ಶ್ರೀಯುತರು ನಮ್ಮನ್ನು ಅಗಲಿರುವುದು ಕನ್ನಡ ಸಾಹಿತ್ಯಕ್ಕೆ ತುಂಬಲಾರದ ನಷ್ಟ. ಕನ್ನಡ ಸಾಹಿತ್ಯ ಲೋಕಕ್ಕೆ ಅವರು ನೀಡಿದ ಕೊಡುಗೆ ಅಪಾರ. ಅವರ ವಂಶವೃಕ್ಷ, ದಾಟು, ತಂತು, ಪರ್ವ, ಗೃಹಭಂಗ, ಸಾರ್ಥ, ಮಂದ್ರ, ಆವರಣ, ಉತ್ತರಕಾಂಡ ಸೇರಿದಂತೆ ಹಲವು ಕೃತಿ, ಕಾದಂಬರಿಗಳು ಜನರ ಮನಸಲ್ಲಿ ಸದಾ ಉಳಿಯಲಿವೆ. ‘ವಂಶವೃಕ್ಷ’, ‘ತಬ್ಬಲಿಯು ನೀನಾದೆ ಮಗನೆ’ ಕಾದಂಬರಿಗಳು ಚಲನಚಿತ್ರಗಳಾಗಿವೆ.

67ನೇ ಅಖಿಲ ಕರ್ನಾಟಕ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ತಮ್ಮ ಅಗಾಧ ಸಂಶೋಧನೆಗಳಿಂದ ಇತಿಹಾಸದ ವ್ಯಾಪಕ ಅಧ್ಯಯನದಿಂದ ಅರ್ಥಪೂರ್ಣ ಸಾಹಿತ್ಯ ರಚಿಸಿ ಕನ್ನಡಕ್ಕೆ ಸರಸ್ವತಿ ಸಮ್ಮಾನ್ ಗೌರವ ತಂದುಕೊಟ್ಟ ಕನ್ನಡದ ಮೊದಲಿಗರು. ಅವರು ಮಾಸ್ತಿ ಪ್ರಶಸ್ತಿ ಹಾಗೂ ರಾಜ್ಯ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ ಪಡೆದಿದ್ದರು. ಅವರ ಅನೇಕ ಕೃತಿಗಳು ಮರಾಠಿ, ಗುಜರಾತಿ ಸೇರಿದಂತೆ ಅನೇಕ ಭಾಷೆಗಳಿಗೆ ಅನುವಾದಗೊಂಡಿದ್ದು ನಮ್ಮ ಸಮಸ್ತ ಕನ್ನಡ ಸಾಹಿತ್ಯಕ್ಕೆ ಹೆಮ್ಮೆ.
ರಾಷ್ಟ್ರೀಯತೆಯ ವಿಚಾರಗಳನ್ನು ಬಲಪಡಿಸುವಲ್ಲಿ ಅವರ ಸಮರ್ಪಣೆ ಎಂದೆಂದಿಗೂ ಶಾಶ್ವತ. ಭಾರತದ ಸಾಹಿತ್ಯ ಲೋಕಕ್ಕೆ ಅವರು ನೀಡಿದ ಕೊಡುಗೆ ಅಪಾರ. ಭಾರತೀಯತೆಯ ಕುರಿತು ಆಳವಾದ ಅಧ್ಯಯನ ಮಾಡಿದ ಮಹಾನ್ ಚೇತನ, ಕಾಲಾತೀತ ಚಿಂತಕರಾಗಿ ದೇಶಕ್ಕೆ ಅಪಾರ ಕೊಡುಗೆಯನ್ನು ನೀಡಿದ್ದಾರೆ. ಅವರ ಬರಹಗಳು ಮುಂದಿನ ಪೀಳಿಗೆಗಳಿಗೆ ನಮ್ಮ ಇತಿಹಾಸ, ಸಂಸ್ಕೃತಿಯ ಪ್ರತಿಬಿಂಬಿಸುವ ಕೊಡುಗೆಯನ್ನು ನೀಡಿದ್ದಾರೆ.
ಇಂದು ಅವರು ಇಹಲೋಕ ತ್ಯಜಿಸಿರುವುದು ಅತ್ಯಂತ ನೋವಿನ ಸಂಗತಿ ಹಾಗೂ ಸಾರಸ್ವತ ಲೋಕ ಬಡವಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲೆಂದು, ಅವರ ಅಪಾರ ಅಭಿಮಾನಿಗಳಿಗೆ ಹಾಗೂ ಅವರ ಕುಟುಂಬಕ್ಕೆ ಅಗಲಿಕೆಯ ನೋವಿನ ಭರಿಸುವ ಶಕ್ತಿಯನ್ನು ನೀಡಲೆಂದು ನಾನು ಪ್ರಾರ್ಥಿಸುತ್ತೇನೆ. ಓಂ ಶಾಂತಿಃ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಕಂಬನಿ ಮಿಡಿದಿದ್ದಾರೆ.
ಇದನ್ನೂ ಓದಿ : ಭೈರಪ್ಪನವರ ನಿಧನದಿಂದ ಸಾಹಿತ್ಯಲೋಕ ಬಡವಾಗಿದೆ – ಪ್ರಧಾನಿ ಮೋದಿ, ಸಿಎಂ ಸಿದ್ದರಾಮಯ್ಯ ಸೇರಿ ಗಣ್ಯರಿಂದ ಸಂತಾಪ!







