100 ಕೋಟಿ ಸರದಾರ ಬಾಗಲೂರು ರೆವಿನ್ಯೂ ಇನ್ಸ್​​ಪೆಕ್ಟರ್ ಸಂದೀಪ್ ಸಿಂಗ್!

ಬೆಂಗಳೂರು : ಕಂದಾಯ ಸಚಿವ ಕೃಷ್ಣ ಬೈರೇಗೌಡರೇ.. ರೆವಿನ್ಯೂ ಇನ್ಸ್​​ಪೆಕ್ಟರ್​ ಮಾಡಿರುವ ಅತೀ ದೊಡ್ಡ ಭೂಹಗರಣ ಬಟಾಬಯಲಾಗಿದೆ. ಬಾಗಲೂರು ರೆವಿನ್ಯೂ ಇನ್ಸ್​​​ಪೆಕ್ಟರ್​ ಸಂದೀಪ್ ಸಿಂಗ್ ಬಾಗಲೂರು ಗ್ರಾಮವನ್ನೇ ಭಾಗ ಭಾಗ ಮಾಡಿ ಮಾರಿದ್ದಾರೆ. ರೆವಿನ್ಯೂ ಇನ್ಸ್​ಪೆಕ್ಟರ್ ಸಂದೀಪ್ ಸಿಂಗ್ ಕೋಟ್ಯಂತರ ಮೌಲ್ಯದ ಭೂಹಗರಣ ನಡೆಸಿದ್ದು, ಬೆಂಗಳೂರು ಏರ್​​ಪೋರ್ಟ್​ ಬಳಿಯ ಭೂಮಿಗೆ ಕನ್ನ ಹಾಕಿದ್ದಾರೆ. ಸರ್ಕಾರಿ ಜಮೀನು, ಕೆರೆಗಳ ಮಾರಾಟದಲ್ಲೂ RI ಸಂದೀಪ್ ಸಿಂಗ್ ಕೈವಾಡವಿರುವುದು ಬೆಳಕಿಗೆ ಬಂದಿದೆ.

ರೆವಿನ್ಯೂ ಇನ್ಸ್​ಪೆಕ್ಟರ್ ಸಂದೀಪ್ ಸಿಂಗ್ ಭೂ ಮಾಫಿಯಾ ಜೊತೆ ಶಾಮೀಲಾಗಿದ್ದು, ಬಾಗಲೂರು, ಸಿಂಗಹಳ್ಳಿಯಲ್ಲಿ ನಕಲಿ ನೋಂದಣಿ ಮಾಡಿಸಿ ಸರ್ಕಾರಿ ಭೂಮಿ ಮಾರಾಟ ದಂಧೆ ನಡೆಸಿದ್ದಾನೆ. ನೂರಾರು ಕೋಟಿ ಅಕ್ರಮದಲ್ಲಿ ಭಾಗಿಯಾದ RI ಸಂದೀಪ್ ಸಿಂಗ್ 50 ಲಕ್ಷದ ರೋಲ್ಯಾಕ್ಸ್​ ವಾಚ್​, ಫೈವ್ ಸ್ಟಾರ್ ಹೊಟೇಲ್​​​​ನಲ್ಲೇ ವಾಸ್ತವ್ಯ ಹುಡುತ್ತಿದ್ದು, ಅಕ್ರಮವಾಗಿ ನೂರಾರು ಕೋಟಿ ಒಡೆಯನಾಗಿ ಐಷಾರಾಮಿ ಜೀವನ ನಡೆಸುತ್ತಿದ್ದಾನೆ.

ಅಷ್ಟೇ ಅಲ್ಲದೇ ಬಿಲ್ಡರ್​ಗಳು, ದೊಡ್ಡ ಭೂಮಾಲಕರೇ ಈ ರೆವಿನ್ಯೂ ಇನ್ಸ್​ಪೆಕ್ಟರ್ ಸಂದೀಪ್​ ಸಿಂಗ್​ನ ಸಹಚರರಾಗಿದ್ದಾರೆ. ಸ್ಕ್ವಾರ್​ ಫೀಟ್​​ಗೆ 5-6 ಸಾವಿರ ಇರೋ ಊರಿಗೆ ಮಾತ್ರ RI ಆಗಿ ನೇಮಕವಾಗುವ ಸಂದೀಪ್ ಸಿಂಗ್, ತಹಶೀಲ್ದಾರರು, ಎಸಿಗಳನ್ನು ಕ್ಯಾರೇ ಮಾಡುವುದಿಲ್ಲ. RI ಸಂದೀಪ್ ಸಿಂಗ್ ಕೊಟ್ಟ ಫೈಲ್​ಗೆ ತಹಶೀಲ್ದಾರ್​ ಕಮಕ್ ಕಿಮಕ್ ಅನ್ದೇ ಸಹಿ ಹಾಕಬೇಕು. RI ಸಂದೀಪ್ ಸಿಂಗ್​​ ಸಿಂಗಹಳ್ಳಿಯ 13 ಎಕರೆ ಜಮೀನನ್ನು ತನ್ನ ಗೆಳೆಯ ಬಿಲ್ಡರ್​​ಗೆ ರಿಜಿಸ್ಟರ್ ಮಾಡಿಸಿದ್ದು, ಬರೋಬ್ಬರಿ 500 ಕೋಟಿ ಮೌಲ್ಯದ ಸಿಂಗಹಳ್ಳಿ ಜಮೀನು ಸಂದೀಪ್ ಸಿಂಗ್ ಸಹಚರ ಬಿಲ್ಡರ್​ ಪಾಲಾಗಿದೆ.

ಈ ಬಗ್ಗೆ ಸಿಂಗಹಳ್ಳಿಯ ಗ್ರಾಮಸ್ಥರು ದೂರು ನೀಡಿದರೂ ಬಾಗಲೂರು RI​ ಸಂದೀಪ್​ ಸಿಂಗ್ ಮೇಲೆ ಈವರೆಗೆ ಕ್ರಮವಿಲ್ಲ. ಯಾವ ಭ್ರಷ್ಟ ಅಧಿಕಾರಿಯನ್ನೂ ಬಿಡದ IAS ಆದಿತ್ಯ ಬಿಸ್ವಾಸ್​ ಅವರೇ, ಈತನ ಮೇಲೆ ಎಫ್​ಐಆರ್ ಮಾಡಿ, ಅರೆಸ್ಟ್​ ಮಾಡಿ. ಬಾಗಲೂರು ರೆವೆನ್ಯೂ ಇನ್ಸ್​​ಪೆಕ್ಟರ್ ಸಂದೀಪ್ ಸಿಂಗ್ ಹಗರಣಗಳ ತನಿಖೆಗೆ SIT ರಚಿಸಿ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. RI ಸಂದೀಪ್​ ಸಿಂಗ್ ವಾಟ್ಸಪ್ ಕಾಲ್​ ಡಿಟೇಲ್ಸ್​ ತೆಗೆದ್ರೆ ಹಗರಣಗಳ ಸರಮಾಲೆಯೇ ಹೊರಬರುತ್ತೆ. ಸಂದೀಪ್ ಸಿಂಗ್ ಮೊಬೈಲ್ ಸಿಡಿಆರ್ ತೆಗೆದ್ರೆ ಬೆಂಗಳೂರಿನ ಭೂಹಗರಣ ಬಯಲಿಗೆ ಬರಲಿದೆ. ಆರ್​​ಐ ಕಚೇರಿ, ವಾಸ್ತವ್ಯ ಹೂಡಿದ ಪೈವ್​ ಸ್ಟಾರ್​ ಹೊಟೇಲ್​ಗಳ ಸಿಸಿಟಿವಿ ಪರಿಶೀಲಿಸಿ ಎಂದು IAS ಬಿಸ್ವಾಸ್ ಅವರಿಗೆ ಮನವಿ ಮಾಡಿದ್ದಾರೆ.

IAS ಆದಿತ್ಯ ಬಿಸ್ವಾಸ್​
IAS ಆದಿತ್ಯ ಬಿಸ್ವಾಸ್​

ಇನ್ನು, ಹಗರಣ ಹೊರ ಬರುತ್ತಿದ್ದಂತೆ ಬಾಗಲೂರು RI ಸಂದೀಪ್​ ಸಿಂಗ್ ಸ್ವಂ ನಿವೃತ್ತಿಗೆ ಅರ್ಜಿ ಸಲ್ಲಿಸಿದ್ದಾರೆ. ನಿವೃತ್ತಿಯಾಗಿ ಭೂಹಗರಣದ ಕಪ್ಪು ಹಣವನ್ನು ಬ್ಯುಸಿನೆಸ್​ಗೆ ಹೂಡಿಕೆ ಮಾಡುವ ಪ್ಲ್ಯಾನ್​ ಸಂದೀಪ್​ ಮಾಡಿದ್ದಾರೆ. ಹೀಗಾಗಿ ಬಾಗಲೂರು ರೆವಿನ್ಯೂ ಇನ್ಸ್​​ಪೆಕ್ಟರ್ ಸಂದೀಪ್ ಸಿಂಗ್ ತನಿಖೆಯಾದ್ರೆ ಸಾವಿರಾರು ಎಕರೆ ಭೂ ಹಗರಣ ಬಯಲಿಗೆ ಬರಲಿದೆ. EDಯಲ್ಲೂ ಬಾಗಲೂರು ಬಾಗಲೂರು ರೆವಿನ್ಯೂ ಇನ್ಸ್​​ಪೆಕ್ಟರ್ ವಿರುದ್ಧ ದೂರು ದಾಖಲಾಗಿದೆ. ಅಷ್ಟೇ ಅಲ್ಲದೇ, ಸುದ್ದಿ ಪ್ರಸಾರಕ್ಕೆ ತಡೆಯಾಜ್ಞೆ ತರಲು ಸಂದೀಪ್ ಸಿಂಗ್ ಟೀಮ್ ಸಿಟಿ ಸಿವಿಲ್ ಕೋರ್ಟ್ ಮೊರೆ ಹೋಗಿದೆ.

ಸಿಟಿ ಸಿವಿಲ್ ಕೋರ್ಟ್​ಗೆ ಸಲ್ಲಿಸಿದ ಸೇಲ್​ ಡೀಡ್ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಸಿಸಿಎಚ್ 26 ಜಡ್ಜ್,​ ಸಂದೀಪ್ & ಟೀಮ್​ ಪರ ತಡೆಯಾಜ್ಞೆ ನೀಡಲು ನಿರಾಕರಿಸಿದೆ. ಮಾನ್ಯ ನ್ಯಾಯಾಲಯವೇ ಸೇಲ್ ಡೀಡ್​ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ರೂ RI ಸಂದೀಪ್​ ಸಿಂಗ್​​ ಮೇಲೆ ಕ್ರಮಕ್ಕೆ ಮೀನಾಮೇಷ ಯಾಕೆ? ಭೂ ಮಾಫಿಯಾದ 13 ಜನರೊಂದಿಗೆ ಸೇರಿಕೊಂಡು ಬಾಗಲೂರು RI ಸಂದೀಪ್​ ಸಿಂಗ್​ ಕಳ್ಳಾಟವಾಡಿದ್ದು, ಸಾವಿರಾರು ಕೋಟಿ ಮೌಲ್ಯದ ಸರ್ಕಾರಿ ಕೆರೆ ಜಾಗ ಅಕ್ರಮವಾಗಿ ಮಾರಾಟ ಮಾಡಿದ್ದಾನೆ. ಹೀಗಾಗಿ ಕಂದಾಯ ಅಧಿಕಾರಿಗಳೇ, ಬಾಗಲೂರು ರೆವಿನ್ಯೂ ಇನ್ಸ್​​ಪೆಕ್ಟರ್ ಸಂದೀಪ್ ಸಿಂಗ್​ನ್ನು ಕೂಡಲೇ ಅರೆಸ್ಟ್​ ಮಾಡಿ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಇದನ್ನೂ ಓದಿ : ‘ಅಧಿರ’ ಯುಗ ಆರಂಭ.. ಮತ್ತೊಮ್ಮೆ ಆರ್‌ಕೆಡಿ ಸ್ಟುಡಿಯೋಸ್ ಜೊತೆ ಕೈಜೋಡಿಸಿದ ನಿರ್ದೇಶಕ ಪ್ರಶಾಂತ್ ವರ್ಮಾ!

Btv Kannada
Author: Btv Kannada

Read More