ಛಲವಾದಿ ನಾರಾಯಣಸ್ವಾಮಿ ವಿರುದ್ಧ ಆಕ್ಷೇಪಾರ್ಹ ಪದ ಬಳಕೆ – ಕುರುಬ ಮುಖಂಡರ ವಿರುದ್ಧ ಕ್ರಮಕ್ಕೆ ಕಮಿಷನರ್​​ಗೆ ಬಿಜೆಪಿ ದೂರು!

ಬೆಂಗಳೂರು : ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಹಾಗೂ ಎಂಎಲ್‌ಎ ಶ್ರೀವತ್ಸ ವಿರುದ್ಧ ಆಕ್ಷೇಪಾರ್ಹ ಪದ ಬಳಕೆ ಸಂಬಂಧ ಕುರುಬ ಮುಖಂಡರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಬೆಂಗಳೂರು ನಗರ ಪೊಲೀಸ್​ ಕಮಿಷನರ್ ಸೀಮಂತ್​ ಕುಮಾರ್​ ಸಿಂಗ್​​ ಅವರಿಗೆ​​ ಬಿಜೆಪಿ ದೂರು ನೀಡಿದೆ.

ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡುವ ವಿಚಾರದಲ್ಲಿ ಆ ಸಮುದಾಯದ ವಿರುದ್ಧ ಎಸ್‌ಟಿ ಹಾಗೂ ವಾಲ್ಮೀಕಿ ಸಮುದಾಯವನ್ನು ಎತ್ತಿಕಟ್ಟುವಂತಹ ಹೇಳಿಕೆ ನೀಡಿದ್ದ ಆರೋಪಕ್ಕೆ ಸಂಬಂಧಿಸಿದಂತೆ ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಎಂಎಲ್‌ಎ ಶ್ರೀವತ್ಸ ವಿರುದ್ದ ಇತ್ತಿಚೆಗೆ ಪ್ರಕರಣ ದಾಖಲಾಗಿತ್ತು. ಅದಾದ ಬಳಿಕ ಛಲವಾದಿ ನಾರಾಯಣಸ್ವಾಮಿ, ಎಂಎಲ್‌ಎ ಶ್ರೀವತ್ಸ ಬಗ್ಗೆ ಕುರುಬ ಮುಖಂಡರು ನಾನಾ ರೀತಿಯಲ್ಲಿ ಆಕ್ಷೇಪಾರ್ಹ ಪದ ಬಳಕೆ, ಹಾಗೂ ಸಾಮಾಜಿಕ ಜಾಲತಾಣದಲ್ಲಿ ಕೆಲ ನಿಂದನೆ ಮಾಡಿರುವ ಆರೋಪ ಕೇಳಿಬಂದಿದೆ. ಅಷ್ಟೇ ಅಲ್ಲದೇ, ಕುರುಬ ಮುಖಂಡರು ದೂರು ನೀಡುವಾಗ MLA ಶ್ರೀವತ್ಸ, ಛಲವಾದಿ ನಾರಾಯಣಸ್ವಾಮಿನ ಬಂಧಿಸದಿದ್ದರೆ ಇಡೀ ರಾಜ್ಯದ್ಯಾಂತ ಉಗ್ರವಾದಂತ ಹೋರಾಟ, ಸರ್ಕಾರಿ ಬಸ್​​ಗಳಿಗೆ ಕಲ್ಲು ಹೊಡೆಯೋದಾಗಿ, ಕಛೇರಿಗಳಿಗೆ ಬೆಂಕಿ ಹಚ್ಚುವ ಕೆಲಸ ಮಾಡಬೇಕಾಗುತ್ತದೆ ಎಂದು ಸಿದ್ದಣ್ಣ ತೇಜಿ, ಕುರುಬ ಸಮಾಜದ ರಾಜ್ಯಾಧ್ಯಕ್ಷರು ಪೊಲೀಸ್ ಕಮಿಷನರ್ ಕಚೇರಿಯ ಆವರಣದಲ್ಲಿ ಹೇಳಿಕೆಯನ್ನು ನೀಡಿದ್ದಾರೆ. ಇದೀಗ ಈ ರೀತಿಯ ಹೇಳಿಕೆಗಳು ಕಾನೂನು ಪ್ರಕಾರ ಶಿಕ್ಷಾರ್ಹ ಅಪರಾಧ  ಆದ್ದರಿಂದ ಇವರ ಮೇಲೇ ಕಾನೂನು ಕ್ರಮಕೈಗೊಳ್ಳಬೇಕು ಬಿಜೆಪಿ ಆಗ್ರಹಿಸಿದ್ದು, ನಗರ ಪೊಲೀಸ್​ ಕಮಿಷನರ್​ಗೆ ದೂರು ನೀಡಿದೆ.

ಸರ್ಕಾರಿ ಬಸ್ ಗಳಿಗೆ ಕಲ್ಲು ಹೊಡೆಯುತ್ತೇವೆ, ಸರ್ಕಾರದ ಆಸ್ತಿ ಪಾಸ್ತಿಯನ್ನು ನಷ್ಟಮಾಡುವ ಉದ್ದೇಶದ ಹೇಳಿಕೆ ನೀಡಿ, ಸಮುದಾಯಗಳನ್ನು ದಂಗೆ ಏಳುವ ರೀತಿಯಲ್ಲಿ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ. ಇದು ಶಿಕ್ಷಾರ್ಹ ಅಪರಾಧವಾಗಿರುತ್ತದೆ. ಇವರ ಹೇಳಿಕೆಯ ಹಿನ್ನೆಲೆಯು ಸಮಾಜದಲ್ಲಿ ಅಶಾಂತಿಯನ್ನು ಉಂಟು ಮಾಡುವುದು, ಗಲಭೆಗಳನ್ನು ಪ್ರಚೋದಿಸುವುದು, ಜಾತಿ ಜಾತಿಗಳ ಮಧ್ಯೆ ಹಾಗೂ ಸಾರ್ವಜನಿಕರ ಮಧ್ಯೆ ಗಲಾಟೆಗಳನ್ನು ಸೃಷ್ಟಿಸುವುದು, ಸಾರ್ವಜನಿಕರಿಗೆ, ಸರ್ಕಾರಿ ನೌಕರರಿಗೆ ಬೆದರಿಕೆ ಹಾಕುವುದು, ಸಮಸ್ಯೆಗಳನ್ನು ಸೃಷ್ಟಿಸುವುದು, ಸಮಾಜದಲ್ಲಿ ಗಲಭೆಕೋರರಿಗೆ ಪ್ರೇರಣೆ ನೀಡಿದಂತೆ ಆಗುತ್ತದೆ.

ಈ ಹೇಳಿಕೆಯಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಠ ಪಂಗಡಗಳ ಸಮುದಾಯಕ್ಕೆ ಅವಮಾನ ಆದಂತಿದೆ, ಆಘಾತುಕವಾಗಿದೆ. ನೋವಾಗಿದೆ ಹಾಗೂ ಶಾಂತಿ ಕದಡುವಂತಿದೆ. ಇವರು ಸಾರ್ವಜನಿಕರು ಒಂದು ರೀತಿಯಲ್ಲಿ ಭಯಭೀತರಾಗುವಂತಹ ಹೇಳಿಕೆಗಳನ್ನು ನೀಡಿ, ಭಯದ ವಾತಾವರಣ ಸೃಷ್ಟಿ ಮಾಡಿದ್ದಾರೆ. ಇವರ ಹೇಳಿಕೆಯ ಉದ್ದೇಶ ಮತ್ತು ಹಿಂದಿರುವ ಷಡ್ಯಂತ್ರವು ಸಮಾಜದಲ್ಲಿ ಅರಾಜಕತೆ ಸೃಷ್ಟಿ ಮಾಡುವುದಾಗಿದೆ.

ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರನ್ನು ಏಕವಚನದಲ್ಲಿ ಸಂಭೋದಿಸಿ ನಿಂದಿಸಿದ್ದಾರೆ. ಪರಿಶಿಷ್ಟ ಜಾತಿ ಸಮುದಾಯಕ್ಕೆ ಸೇರಿದ ವಿರೋಧ ಪಕ್ಷದ ನಾಯಕರನ್ನು ಸಾರ್ವಜನಿಕ ಸ್ಥಳದಲ್ಲಿ (ಸರ್ಕಾರಿ ಕಚೇರಿಯ ಎದುರುಗಡೆ) ನಿಂದನೆ ಮಾಡಿ, ಏಕವಚನದಲ್ಲಿ ಮಾತನಾಡಿ ಅಗೌರವ ತೋರಿರುತ್ತಾರೆ. ಇದರಿಂದ ವಿರೋಧ ಪಕ್ಷದ ನಾಯಕರ ಹಕ್ಕಿಗೆ ಚ್ಯುತಿ ಆಗಿರುತ್ತದೆ ಹಾಗೂ ಅಧಿಕಾರದ ವ್ಯಾಪ್ತಿಗೆ ಧಕ್ಕೆ, ಅವಮಾನವಾಗಿದ್ದು, ವಿಪಕ್ಷ ನಾಯಕನ ಸ್ಥಾನವನ್ನೇ ಅಭದ್ರಗೊಳಿಸುವ ಹುನ್ನಾರವಿದೆ.

ರಾಜ್ಯದಲ್ಲಿ ಮುಂದೆ ಆಗುವ ಅನಾಹುತಗಳನ್ನು, ಸರ್ಕಾರಿ ಬಸ್ ಹಾನಿ, ಸರ್ಕಾರಿ ಕಚೇರಿಗೆ ಬೆಂಕಿ ಹಚ್ಚಿ ನಾಶ ಮಾಡುವ ಕೃತ್ಯಗಳನ್ನು ತಡೆಯಲು, ಸರ್ಕಾರಿ ಆಸ್ತಿಯನ್ನು ರಕ್ಷಣೆ ಮಾಡಲು ಕ್ರಮವಹಿಸಬೇಕು. ಸದರಿಯವರ ವಿರುದ್ಧ ರೌಡಿಶೀಟರ್ ಕೇಸ್ ದಾಖಲು ಮಾಡಬೇಕು. ಇಂತವರನ್ನು ಗಡಿಪಾರು ಮಾಡಬೇಕು. ಇವರ ಮೇಲೆ ಕಾನೂನು ರೀತ್ಯಾ ಶಿಸ್ತು ಕ್ರಮ ಕೈಗೊಂಡು, ಕೇಸ್ ದಾಖಲು ಮಾಡಿ ಇವರನ್ನು ಈ ಕೂಡಲೇ ಬಂಧಿಸಬೇಕು. ಇಂತವರಿಗೆ ಕುಮ್ಮಕ್ಕು ನೀಡುವ ಪ್ರಭಲ ವ್ಯಕ್ತಿ ಯಾರೇ ಆಗಲಿ ಅಂತವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಬಿಜೆಪಿ ಮನವಿ ಮಾಡಿದೆ.

ಇದನ್ನೂ ಓದಿ : ಪೌರ ಕಾರ್ಮಿಕರೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡ ನಿರ್ದೇಶಕ ಇಂದ್ರಜಿತ್ ಲಂಕೇಶ್!

Btv Kannada
Author: Btv Kannada

Read More