ಮಹೇಶ್‌ ಶೆಟ್ಟಿ ತಿಮರೋಡಿ ದಕ್ಷಿಣ ಕನ್ನಡದಿಂದ 1 ವರ್ಷ ಗಡಿಪಾರು.. ಎಲ್ಲಿಗೆ ಗೊತ್ತಾ?

ಮಂಗಳೂರು : ಧರ್ಮಸ್ಥಳ ಪ್ರಕರಣ ಹಾಗೂ ಸೌಜನ್ಯ ಕೇಸ್​ ಹೋರಾಟದಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಂಡಿದ್ದ ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಗಡಿಪಾರು ಮಾಡಲಾಗಿದೆ.

ಮಹೇಶ್‌ ಶೆಟ್ಟಿ ತಿಮರೋಡಿಯನ್ನು ದಕ್ಷಿಣ ಕನ್ನಡ ಜಿಲ್ಲೆಯಿಂದ 1 ವರ್ಷದ ಅವಧಿಗೆ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿಗೆ ಗಡಿಪಾರು ಮಾಡಿ ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತೆ ಸ್ಟೆಲ್ಲಾ ವರ್ಗೀಸ್‌ ಮಂಗಳವಾರ ಆದೇಶ ಹೊರಡಿಸಿದ್ದಾರೆ. ತಿಮರೋಡಿ ಅವರ ವಿರುದ್ಧ ಸುಮಾರು 32 ಪ್ರಕರಣಗಳು ದಾಖಲಾಗಿದ್ದವು. ಇದಾದ ಬೆನ್ನಲ್ಲೇ ಈ ಗಡಿಪಾರು ಆದೇಶ ಹೊರಬಿದ್ದಿದೆ.

ಹಲವು ಪ್ರಕರಣಗಳಲ್ಲಿ ವಿಚಾರಣೆಯನ್ನು ಎದುರಿಸುತ್ತಿರುವ ಮಹೇಶ್ ಶೆಟ್ಟಿ ತಿಮರೋಡಿ ಅವರು, ಹಲವು ಹೋರಾಟಗಳಲ್ಲಿ ಗುರುತಿಸಿಕೊಂಡಿದ್ದಾರೆ. ಸೌಜನ್ಯ ಪರ ಹೋರಾಟದಲ್ಲೂ ಸಹ ಇವರು ಮುಂಚೂಣಿಯಲ್ಲಿದ್ದರು. ಅಲ್ಲದೇ ಧರ್ಮಸ್ಥಳ ಪ್ರಕರಣದಲ್ಲೂ ಸಹ ಕಾಣಿಸಿಕೊಂಡಿದ್ದು, ಈ ಸಂಬಂಧ ಇವರ ಮನೆ ಮೇಲೆ ಎಸ್​ಐಟಿ ಅಧಿಕಾರಿಗಳು ದಾಳಿ ಮಾಡಿದ್ದರು. ಈ ವೇಳೆ ಶಸ್ತ್ರಾಸ್ತ್ರಗಳು ಪತ್ತೆಯಾಗಿದ್ದು, ಈ ಸಂಬಂಧ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಲ್ಲದೇ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ವಿರುದ್ಧವೂ ಸಹ ಅವಹೇಳನಕಾರಿ ಹೇಳಿಕೆ ನೀಡಿ ಬಂಧನಕ್ಕೊಳಗಾಗಿದ್ದರು. ಸದ್ಯ ಇವರ ವಿರುದ್ಧ ಸುಮಾರು 32 ಪ್ರಕರಣ ಇದ್ದು, ವಿಚಾರಣೆ ಹಂತದಲ್ಲಿವೆ.

ಇದನ್ನೂ ಓದಿ : ಕಾಕ್ರೋಚ್ ಸುಧೀ ನಟನೆಯ ‘ಚೈಲ್ಡು’ ಚಿತ್ರದ ಚಿತ್ರೀಕರಣ ಪ್ರಾರಂಭ!

 

Btv Kannada
Author: Btv Kannada

Read More