ಉದಯ ಟಿವಿಯಲ್ಲಿ ದಸರಾ ಹಬ್ಬದ ಪ್ರಯುಕ್ತ ಸೆಪ್ಟೆಂಬರ್ 27 ಶನಿವಾರ ಸಂಜೆ 6 ಗಂಟೆಗೆ ಧ್ರುವ ಸರ್ಜಾ ಜೊತೆ ವಿಶೇಷ ಕಾರ್ಯಕ್ರಮ ʻಧ್ರುವ ದಸರಾʼ ಪ್ರಸಾರವಾಗಲಿದೆ. ಭರ್ಜರಿ ಸೆಟ್ನಲ್ಲಿ ಚಿತ್ರರಂಗದ ಪ್ರಮುಖ ತಾರೆಯರ ಉಪಸ್ಥಿತಿಯಲ್ಲಿ ಅದ್ದೂರಿಯಾಗಿ ಚಿತ್ರೀಕರಣಗೊಂಡಿರುವ ʻಧ್ರುವ ದಸರಾʼ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸಿನಿಮಾ ಪಯಣ ಮತ್ತು ಬಾಲ್ಯದಿಂದ ಇಲ್ಲಿಯವರೆಗಿನ ಜೀವನದ ಝಲಕ್ ಕೂಡ ಹೌದು.

ಧ್ರುವ ದಸಾರದ ಒಂದು ವಿಶೇಷ ಎಂದರೆ, ಧ್ರುವ ಅವರಿಗೆ ಗೊತ್ತಿರದೆ ಹಲವು ವಿಶೇಷ ವ್ಯಕ್ತಿಗಳು ಆಗಮಿಸಿ ಅವರಿಗೆ ಅಚ್ಚರಿ ಮೂಡಿಸಿದರು. ಆಗ ಧ್ರುವ ಸರ್ಜಾ ಇವರ ಜೊತೆ ಕಳೆದ ಬಹಳ ಅಪರೂಪದ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಬಹಳಷ್ಟು ಕುತೂಹಲಕರ ಘಟನೆಗಳು, ಭಾವನಾತ್ಮಕ ವಿಷಯಗಳು ಇಲ್ಲಿವೆ. ಕಿಕ್ಕಿರಿದು ನೆರೆದಿದ್ದ ಅಭಿಮಾನಿಗಳ ಜೈಕಾರದ ನಡುವೆ ತಮ್ಮ ʻಕೆಡಿʼ ಚಿತ್ರದ ಹಾಡಿನೊಂದಿಗೆ ಧ್ರುವ ಎಂಟ್ರಿ ಕೊಟ್ಟಿದ್ದು ವಿಶೇಷ. ತಾನು ಸುಪರ್ ಸ್ಟಾರ್ ಎನ್ನಿಸಿಕೊಳ್ಳಲು ಇಷ್ಟಪಡುವುದಿಲ್ಲ. ತಾನೊಬ್ಬ ನಟ ಮಾತ್ರ ಎಂದು ವಿನಯದಿಂದ ಹೇಳಿದ ಧ್ರುವ ಸರ್ಜಾ ಅಭಿಮಾನಿಗಳಿಗಾಗಿ ಇನ್ನು ಮುಂದೆ ಪ್ರತಿವರ್ಷ ಕನಿಷ್ಟ ಎರಡು ಚಿತ್ರಗಳಲ್ಲಿ ನಟಿಸುವುದಾಗಿ ಘೋಷಿಸಿದರು.

ಪತ್ನಿ, ಮಕ್ಕಳ ಉಪಸ್ಥಿತಿ : ಚಿರಂಜೀವಿ ಸರ್ಜಾ ಪತ್ನಿ ಮೇಘನಾ ರಾಜ್ ಆಕಸ್ಮಿಕವಾಗಿ ವೇದಿಕೆಗೆ ಆಗಮಿಸಿ ಧ್ರುವ ಅವರಿಗೆ ಅಚ್ಚರಿ ಮೂಡಿಸಿದರು. ಅತ್ತಿಗೆಯನ್ನು ತಾಯಿಯಂತೆ ಕಾಣುವ ಧ್ರುವ ಅಣ್ಣನನ್ನು ನೆನೆದು ಭಾವುಕರಾದರು. ಮನೆಗೆ ಬಂದಾಗ ತಮ್ಮ ಮಗ ರಾಯನ್ ಜೊತೆ ಧ್ರುವ ಮಗುವಾಗಿ ಇರುವ ರೀತಿಯನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಿದರು ಮೇಘನಾ ರಾಜ್. ಧ್ರುವ ಸರ್ಜಾ ತಮ್ಮ ಪತ್ನಿ ಪ್ರೇರಣಾ ಬಗೆಗೆ ಹೇಳಬೇಕಾದರೆ ಹಿಂದಿನಿಂದ ವೇದಿಕೆಗೆ ಅವರೇ ಸ್ವತ: ಬಂದಿದ್ದು ಇವರಿಗೆ ಆಶ್ಚರ್ಯವನ್ನುಂಟು ಮಾಡಿತು.

ಪ್ರೇರಣಾ ಟಿವಿ ಕಾರ್ಯಕ್ರಮವೊಂದರಲ್ಲಿ ಮೊಟ್ಟಮೊದಲ ಬಾರಿ ಕಾಣಿಸಿಕೊಂಡಿದ್ದು ʻಧ್ರುವ ದಸರಾʼ ವಿಶೇಷಗಳಲ್ಲೊಂದು. ಇದೇ ಸಂದರ್ಭದಲ್ಲಿ ತಮ್ಮ ಹಾಗೂ ಧ್ರುವ ನಡುವಿನ ಪ್ರೇಮಲೋಕದ ದಿನಗಳನ್ನು ಮೆಲುಕು ಹಾಕಿದರು. ಅವರು ಧ್ರುವರಿಗೆ ಪ್ರೇಮ ಪ್ರಸ್ತಾಪ ಮಾಡಿದ್ದನ್ನು ಮರುಸೃಷ್ಟಿಸಲಾಯಿತು. ಕೇಕ್ ಕತ್ತರಿಸುವ ಮೂಲಕ ಮುಂಗಡವಾಗಿ ಧ್ರುವ ಸರ್ಜಾ ಹುಟ್ಟುಹಬ್ಬ ಆಚರಿಸಲಾಯಿತು. ಮಕ್ಕಳಾದ ರುದ್ರಾಕ್ಷಿ ಹಾಗೂ ಹಯವದನ ಕೂಡ ಉಪಸ್ಥಿತರಿದ್ದುದು ವಿಶೇಷವಾಗಿತ್ತು. ಕಲಾವಿದ, ಚಿಕ್ಕಪ್ಪ ಅರ್ಜುನ್ ಸರ್ಜಾ ಅವರು ವಿಡಿಯೋ ಮುಖಾಂತರ ಶುಭ ಕೋರಿದರು. ಧ್ರುವ ಅವರ ನಿಷ್ಠೆ, ಕಠಿಣ ಪರಿಶ್ರಮ, ನಟನಾ ಚಾತುರ್ಯದ ಬಗ್ಗೆ ವಿವರಿಸಿದರು.

ಧ್ರುವ ಸರ್ಜಾ ಅವರಿಗೆ ನಟನೆ ಕಲಿಸಿದ ಗೌರಿ ದತ್ತು ಹಾಗೂ ಮಹಾಂತೇಶ್, ನಟನೆಯಲ್ಲಿ ಅವರಿಗಿರುವ ಶ್ರದ್ಧೆ ವಿವರಿಸಿ ನಾಟಕ ಶಾಲೆಗೆ ದೊಡ್ಡ ಪ್ರಮಾಣದ ದೇಣಿಗೆ ನೀಡಿದ್ದನ್ನು ಸ್ಮರಿಸಿದರು. ಎಂದೋ ನಟಿಸಿದ ನಾಟಕದ ಸಂಭಾಷಣೆ ಯಥಾವತ್ ಒಪ್ಪಿಸಿ ಚಪ್ಪಾಳೆ ಗಿಟ್ಟಿಸಿದರು ಧ್ರುವ. ಗಾಯಕ, ನಟ ಚಂದನ್ ಶೆಟ್ಟಿ ಕಷ್ಟದ ಸಮಯದಲ್ಲಿ ಧ್ರುವ ಸಹಾಯ ಮಾಡಿದ್ದನ್ನು ನೆನೆದರು. ತಾನು ಬರೆದ ಒಂದು ಹಾಡನ್ನು ಎಂಟು ವರ್ಷ ಕಾಪಾಡಿಕೊಂಡು ʻಪೊಗರುʼ ಚಿತ್ರದಲ್ಲಿ ಬಳಸಿಕೊಂಡಿದ್ದನ್ನು ಸ್ಮರಿಸಿದರು.
Author: Btv Kannada
Post Views: 350







