ಹೊಸದಿಲ್ಲಿ : ಕ್ರಿಮಿನಲ್ ವ್ಯಾಪ್ತಿಯಿಂದ ಮಾನನಷ್ಟ ಮೊಕದ್ದಮೆಗಳು ಹೊರ ತರಲು ಇದು ಸಕಾಲ ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ. ಜೆಎನ್‌ಯು (ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ)ದ ಮಾಜಿ ಪ್ರಾಧ್ಯಾಪಕಿ ಅಮಿತಾ ಸಿಂಗ್ ಅವರು ದಾಖಲಿಸಿರುವ ಮಾನನಷ್ಟ ಮೊಕದ್ದಮೆಯಲ್ಲಿ ಸುದ್ದಿ ಜಾಲತಾಣ ‘ದಿ ವೈರ್’ಗೆ ನೀಡಲಾಗಿರುವ ಸಮನ್ಸ್ ವಿರುದ್ಧ ಅರ್ಜಿಯ ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ಎಂ.ಎಂ.ಸುಂದರೇಶ್ ಮತ್ತು ಸತೀಶ್ ಚಂದ್ರ ಶರ್ಮಾ ಅವರ ಪೀಠವು ಈ ಮೌಖಿಕ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.

‘ದಿ ವೈರ್’ ನಡೆಸುತ್ತಿರುವ ಫೌಂಡೇಶನ್ ಫಾರ್ ಇಂಡಿಪೆಂಡೆಂಟ್ ಜರ್ನಲಿಸಂ ಸಲ್ಲಿಸಿದ್ದ ಅರ್ಜಿಯ ಹಿನ್ನೆಲೆಯಲ್ಲಿ ನ್ಯಾಯಾಲಯ ಅಮಿತಾ ಅವರಿಗೆ ನೋಟಿಸ್ ಜಾರಿ ಮಾಡಿದೆ. “ಇದನ್ನು ನಿರಪರಾಧೀಕರಣಗೊಳಿಸುವ ಸಮಯ ಬಂದಿದೆ ಎಂದು ನಾನು ಭಾವಿಸುತ್ತೇನೆ.” ಎಂದು ನ್ಯಾಯಮೂರ್ತಿ ಸುಂದರೇಶ್ ತಿಳಿಸಿದ್ದಾರೆ. ಸುದ್ದಿತಾಣದ ಪರವಾಗಿ ಹಾಜರಾದ ಹಿರಿಯ ವಕೀಲ ಕಪಿಲ್ ಸಿಬಲ್, ನ್ಯಾಯಾಲಯದ ಅಭಿಪ್ರಾಯಕ್ಕೆ ತಲೆದೂಗಿದ್ದಾರೆ.
ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 356, ಮಾನಹಾನಿ ಮಾಡುವುದನ್ನು ಅಪರಾಧೀಕರಿಸುತ್ತದೆ. ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 499ಕ್ಕೆ ಬದಲಾಗಿ ಇದನ್ನು ಜಾರಿಗೆ ತರಲಾಗಿದೆ. ಮಾನಹಾನಿ ಮಾಡುವುದನ್ನು ಕ್ರಿಮಿನಲ್ ಅಪರಾಧವೆಂದು ಪರಿಗಣಿಸುವ ಕೆಲವೇ ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿ ಭಾರತವೂ ಒಂದು. ಹೆಚ್ಚಿನ ನ್ಯಾಯಾಲಯಗಳು ಮಾನಹಾನಿಗೆ ಸಂಬಂಧಿಸಿದಂತೆ ಸಿವಿಲ್ ಪರಿಹಾರವನ್ನಷ್ಟೇ ಒದಗಿಸಿವೆ.
ಸುಬ್ರಮಣಿಯನ್ ಸ್ವಾಮಿ, ರಾಹುಲ್ ಗಾಂಧಿ ಮತ್ತು ಅರವಿಂದ್ ಕೇಜ್ರಿವಾಲ್ ಸೇರಿದಂತೆ ವಿವಿಧ ರಾಜಕಾರಣಿಗಳು ಐಪಿಸಿಯ ಸೆಕ್ಷನ್ 499ರ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿದ್ದರು. ಆದರೆ ಸುಪ್ರೀಂ ಕೋರ್ಟ್ 2016ರಲ್ಲಿ ಅದರ ಸಿಂಧುತ್ವ ಎತ್ತಿಹಿಡಿದಿತ್ತು.
ಇದನ್ನೂ ಓದಿ : ಬೆಳಗಾವಿಯಲ್ಲಿ ಗೋಮಾಂಸ ಸಾಗಿಸುತ್ತಿದ್ದ ವಾಹನಕ್ಕೆ ಬೆಂಕಿಯಿಟ್ಟ ಗ್ರಾಮಸ್ಥರು!







