ರಾಜಕೀಯ ವೈರತ್ವ ಬಿಟ್ಟು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡ ಹೆಚ್​ಡಿಕೆ-ಡಿಕೆಶಿ!

ಬೆಂಗಳೂರು : ಹೆಚ್​ಡಿ ಕುಮಾರಸ್ವಾಮಿ ಹಾಗೂ ಡಿಕೆ ಶಿವಕುಮಾರ್ ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಜೋಡೆತ್ತುಗಳು ಎಂದೇ ಗುರುತಿಸಿಕೊಂಡವರು. ನಂತರ ಬದಲಾದ ಸನ್ನಿವೇಶದಲ್ಲಿ ಬಿಜೆಪಿ ಜತೆ ಜೆಡಿಎಸ್ ಕೈಜೋಡಿಸಿದ್ದರಿಂದ ಕುಮಾರಸ್ವಾಮಿ ಕೇಂದ್ರ ಸಚಿವರಾದರು. ಡಿಕೆ ಶಿವಕುಮಾರ್ ಕರ್ನಾಟಕ ಕಾಂಗ್ರೆಸ್ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಯಾದರು.

ಅಲ್ಲಿಂದ ಉಭಯ ನಾಯಕರ ನಡುವೆ ತೀವ್ರ ರಾಜಕೀಯ ವಾಕ್ಸಮರ, ಬದ್ಧ ರಾಜಕೀಯ ವೈರತ್ವ ಏರ್ಪಟ್ಟಿತ್ತು. ಇದೀಗ ಉಭಯ ನಾಯಕರು ರಾಜಕೀಯ ವೈರತ್ವ ಮರೆತು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ. ಬೆಂಗಳೂರಿನಲ್ಲಿ ಒಕ್ಕಲಿಗ ಸಮುದಾಯದ ಸಭೆಗೆ ಹಾಜರಾದ ಕುಮಾರಸ್ವಾಮಿ ಹಾಗೂ ಡಿಕೆ ಶಿವಕುಮಾರ್, ನಿರ್ಮಲಾನಂದ ಸ್ವಾಮೀಜಿ ಜತೆ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.

ರಾಜ್ಯದಲ್ಲಿ ಸೆಪ್ಟೆಂಬರ್​ 22ರಿಂದ ಜಾತಿ ಗಣತಿ ಹಿನ್ನೆಲೆ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ವತಿಯಿಂದ ಇಂದು ವಿಜಯನಗರದ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ನಿರ್ಮಲಾನಂದನಾಥ ಸ್ವಾಮೀಜಿಗಳ ನೇತೃತ್ವದಲ್ಲಿ ಒಕ್ಕಲಿಗರ ಸಮುದಾಯದಿಂದ ‘ಜಾತಿ ಗಣತಿ’ ಸಮಾಲೋಚನಾ ಸಭೆ ನಡೆಯುತ್ತಿದೆ.

ಡಿಸಿಎಂ ಡಿಕೆ ಶಿವಕುಮಾರ್, ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ, ವಿಪಕ್ಷ ನಾಯಕ ಆರ್​.ಅಶೋಕ್​, ಮಾಜಿ ಸಿಎಂ ಡಿವಿ ಸದಾನಂದ ಗೌಡ, ಸಂಸದ ಡಾ.ಕೆ ಸುಧಾಕರ್, ಅಶ್ವಥ್ ನಾರಾಯಣ್, ಬಿಜೆಪಿ MLC ಸಿಟಿ ರವಿ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ನಿಖಿಲ್ ಕುಮಾರಸ್ವಾಮಿ, ಶಾಸಕ ಜಿಟಿ ದೇವೇಗೌಡ, ಮಂಥರ್ ಗೌಡ ಸೇರಿ ಹಲವರು ಸಭೆಯಲ್ಲಿ ಭಾಗಿಯಾಗಿದ್ದಾರೆ. ನಿರ್ಮಲಾನಂದನಾಥ ಶ್ರೀಗಳನ್ನು ಭೇಟಿ ಮಾಡಿ ಎಲ್ಲಾ ಪಕ್ಷದ ಒಕ್ಕಲಿಗ ನಾಯಕರು ಆಶೀರ್ವಾದ ಪಡೆದಿದ್ದು, ಸಭೆಯಲ್ಲಿ ಜಾತಿ ಗಣತಿ ಬಗ್ಗೆ ಮಹತ್ವದ ಚರ್ಚೆಗಳು ನಡೆಸುತ್ತಿದ್ದಾರೆ.

ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡರು ಆರೋಗ್ಯ ನಿಮಿತ್ತ ಸಭೆಗೆ ಗೈರಾಗಿದ್ದಾರೆ. ಹೀಗಾಗಿ ಹೆಚ್​ಡಿಕೆ ಜೊತೆಯಲ್ಲಿ ದೂರವಾಣಿ ಮೂಲಕ ಹೆಚ್​ಡಿಡಿ ಚರ್ಚೆ ನಡೆಸಿದ್ದು,  ಏನೆಲ್ಲಾ ವಿಚಾರ ಪ್ರಸ್ತಾಪ ಮಾಡಬೇಕು ಅಂತ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ : ಪವರ್ ಸ್ಟಾರ್ ಪುನೀತ್ ರಾಜ್​​ಕುಮಾರ್​ ಕನಸು ನನಸು.. ಜೀ5, PRK ಪ್ರೊಡಕ್ಷನ್ಸ್ ಲಾಂಛನದಲ್ಲಿ ‘ಮಾರಿಗಲ್ಲು’ ವೆಬ್​​ ಸೀರಿಸ್​ ಘೋಷಣೆ!

Btv Kannada
Author: Btv Kannada

Read More