“ಮಹಾನ್” ಚಿತ್ರದ ಪ್ರಮುಖ ಪಾತ್ರದಲ್ಲಿ ದಕ್ಷಿಣ ಭಾರತದ ಖ್ಯಾತ ನಟಿ‌ ವರ್ಷ ಬೊಳ್ಳಮ್ಮ!

ಸದಭಿರುಚಿಯ ಚಿತ್ರಗಳ ನಿರ್ದೇಶಕ ಪಿ.ಸಿ.ಶೇಖರ್ ನಿರ್ದೇಶನದ, ಪ್ರತಿಷ್ಠಿತ ಸಂಸ್ಥೆಯ ಸಹಯೋಗದೊಂದಿಗೆ ಆಕಾಶ್ ಪಿಕ್ಚರ್ಸ್ ಲಾಂಛನದಲ್ಲಿ ಪ್ರಕಾಶ್ ಬುದ್ದೂರು ಅವರು ನಿರ್ಮಿಸುತ್ತಿರುವ ಹಾಗೂ ಜನಪ್ರಿಯ ನಟ ವಿಜಯ ರಾಘವೇಂದ್ರ ನಾಯಕರಾಗಿ ನಟಿಸುತ್ತಿರುವ “ಮಹಾನ್” ಚಿತ್ರದ ಪ್ರಮುಖಪಾತ್ರದಲ್ಲಿ ದಕ್ಷಿಣ ಭಾರತದ ಖ್ಯಾತ ನಟಿ ವರ್ಷ ಬೊಳ್ಳಮ್ಮ ಅಭಿನಯಿಸುತ್ತಿದ್ದಾರೆ. ತಮಿಳಿನ “ಬಿಗಿಲ್”, “96” ಸೇರಿದಂತೆ ಅನೇಕ ಸೂಪರ್ ಹಿಟ್ ಚಿತ್ರಗಳಲ್ಲಿ ಹಾಗೂ ತೆಲುಗು, ಮಲೆಯಾಳಂ ಚಿತ್ರಗಳಲ್ಲೂ‌ ನಟಿಸಿರುವ ವರ್ಷ ಬೊಳ್ಳಮ್ಮ ಅವರು ನಟಿಸುತ್ತಿರುವ ಮೊದಲ ಕನ್ನಡ ಚಿತ್ರ ಇದಾಗಿದೆ. “ಮಹಾನ್” ಚಿತ್ರದ ಬಗ್ಗೆ ವರ್ಷ ಬೊಳ್ಳಮ್ಮ ಅವರು ಈ ರೀತಿ ಹೇಳುತ್ತಾರೆ.

ಮೂಲತಃ ಕನ್ನಡದವಳಾದ ನಾನು ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗಳ ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ಈಗ ಇದೇ ಮೊದಲ ಬಾರಿಗೆ ಕನ್ನಡದ “ಮಹಾನ್” ಚಿತ್ರದಲ್ಲಿ ನಟಿಸುತ್ತಿದ್ದೇನೆ. ಮಾತೃಭಾಷೆಯ ಚಿತ್ರದಲ್ಲಿ ನಟಿಸುತ್ತಿರುವುದಕ್ಕೆ ಬಹಳ ಖುಷಿಯಾಗುತ್ತಿದೆ. “ಮಾಹಾನ್” ಒಂದು ರೈತರ ಕುರಿತಾದ ಚಿತ್ರ. ರೈತರ ಬದುಕಿನ ಬವಣೆಗಳನ್ನು ನಿರ್ದೇಶಕರು ಈ ಚಿತ್ರದಲ್ಲಿ ತೋರಿಸಲು ಹೊರಟಿದ್ದಾರೆ. ನಾನು ಪಿ.ಸಿ.ಶೇಖರ್ ನಿರ್ದೇಶನದ ಚಿತ್ರಗಳನ್ನು ನೋಡಿದ್ದೇನೆ.

ಸದಭಿರುಚಿಯ ಚಿತ್ರಗಳ ನಿರ್ದೇಶಕರು ಅವರು. ಪಿ.ಸಿ.ಶೇಖರ್ ಅವರು “ಮಹಾನ್” ಚಿತ್ರದ ಕಥೆ ಹೇಳಿದಾಗ, ಕಥೆಯಲ್ಲಿರುವ ಸಾಮಾಜಿಕ ಕಳಕಳಿ ಬಹಳ ಇಷ್ಟವಾಯಿತು. ಪಿ.ಸಿ.ಶೇಖರ್ ಅವರ ಜೊತೆಗೆ ಕೆಲಸ ಮಾಡುತ್ತಿರುವುದು ಹಾಗೂ ವಿದ್ಯಾ ಸಂಸ್ಥೆ ನಡೆಸುತ್ತಿರುವ ಪ್ರಕಾಶ್ ಬುದ್ದೂರು ಅವರು ನಿರ್ಮಿಸುತ್ತಿರುವ ಕಳಕಳಿಯುಳ್ಳ ಈ ಸಿನಿಮಾದಲ್ಲಿ ಅಭಿನಯಿಸುತ್ತಿರುವುದು ನನಗೆ ಬಹಳ ಸಂತಸ ತಂದಿದೆ. ಇನ್ನೂ, ನಾನು ವಿಜಯ ರಾಘವೇಂದ್ರ ಅವರ ಅಭಿಮಾನಿ. ಅವರೊಟ್ಟಿಗೆ ಈ ಚಿತ್ರದಲ್ಲಿ ನಟಿಸುತ್ತಿರುವುದಕ್ಕೆ ಬಹಳ ಸಂತೋಷವಾಗಿದೆ ಎಂದು ವರ್ಷ ಬೊಳ್ಳಮ್ಮ ತಿಳಿಸಿದ್ದಾರೆ. ವಿಜಯ ರಾಘವೇಂದ್ರ, ರಾಧಿಕಾ ನಾರಾಯಣ್, ಮಿತ್ರ, ನಮ್ರತ ಗೌಡ, ವರ್ಷ ಬೊಳ್ಳಮ್ಮ ಅವರು “ಮಹಾನ್” ಚಿತ್ರದ ತಾರಾಬಳಗದಲ್ಲಿದ್ದಾರೆ‌.

ಇದನ್ನೂ ಓದಿ : ಪಕ್ಕದ ಬಟ್ಟೆ ಅಂಗಡಿ ಮಾಲೀಕನ ಕೊಲೆಗೆ 5 ಲಕ್ಷ ಸುಪಾರಿ – ಆರೋಪಿ ಅರೆಸ್ಟ್​​!

Btv Kannada
Author: Btv Kannada

Read More